ಕೃಷಿ ಅಂಕಿ ಅಂಶಗಳು
 
ಕೃಷಿ ಮತ್ತು ಅದರ ಘಟಕ ಉದ್ಯಮಗಳನ್ನು ಕುರಿತಂತೆ ಅಂಕಿ ಅಂಶಗಳ ವೈಜ್ಞಾನಿಕ ಸಂಗ್ರಹ, ಕ್ರಮಬದ್ಧ ಸಂಸ್ಕರಣೆ ಹಾಗೂ ತನ್ಮೂಲಕ ಯುಕ್ತ ತೀರ್ಮಾನ ಪಡೆಯುವಿಕೆ ಇವನ್ನು ಈ ಲೇಖನದಲ್ಲಿ ವಿವರಿಸಿದೆ. ಪ್ರಾಚೀನ ಭಾರತದಲ್ಲಿ ಇಂಥ ಒಂದು ಕ್ರಮ ಪ್ರಚಲಿತವಾಗಿತ್ತು ಎನ್ನುವುದಕ್ಕೆ ಮುಂದಿನ ಉದ್ಧøತ ವಾಕ್ಯಗಳು ಸಾಕ್ಷಿ. ಗೋಪ ಅಥವಾ ಹಳ್ಳಿಯ ಶ್ಯಾನುಭೋಗನ ಕರ್ತವ್ಯವನ್ನು ಅಲ್ಲಿ ಹೀಗೆ ನಿರೂಪಿಸಿದೆ. “ಹಳ್ಳಿಗಳಿಗೆ ಮೇರೆಗಳನ್ನು ಏರ್ಪಡಿಸುವುದು, ಕೃಷಿಮಾಡಿದ ಮತ್ತು ಮಾಡದಿರುವ ಭೂಮಿಯ ನಿವೇಶನಗಳು, ಸಮತಟ್ಟುಗಳು, ತರಿ ಜಮೀನುಗಳು, ತೋಟಗಳು, ತರಕಾರಿ ತೋಟಗಳು, ಪೊದೆಗಳು, ಬೇಲಿಗಳು, ಕಾಡುಗಳು, ಯಜ್ಞವೇದಿಗಳು, ದೇವಸ್ಥಾನಗಳು, ನೀರಾವರಿ ಆಸರೆಗಳು, ಶ್ಮಶಾನಗಳು, ಧರ್ಮಸತ್ರಗಳು, ಅರವಟ್ಟಿಗೆಗಳು, ಯಾತ್ರಾಸ್ಥಳಗಳು, ಹುಲ್ಲುಗಾವಲುಗಳು ಮತ್ತು ರಸ್ತೆಗಳು ಎಂದು ಎಣಿಕೆ ಮಾಡಿ ಮತ್ತು ಅದರಿಂದ ನಾನಾ ಹಳ್ಳಿಗಳಲ್ಲಿರುವ ಹೊಲಗಳ, ಕಾಡುಗಳ ಮತ್ತು ರಸ್ತೆಗಳ ಮೇರೆಗಳನ್ನು ನಿಶ್ಚಯಿಸುವುದು; ಅವನು ಕಾಣಿಕೆ, ಮಾರಾಟ, ಧರ್ಮ ಮತ್ತು ಹೊಲಗಳನ್ನು ಕುರಿತು ತೆರಿಗೆಯ ಮಾಫಿಗಳನ್ನು ದಾಖಲು ಮಾಡುವುದು ಮತ್ತು ತೆರಿಗೆ ಕೊಡುವ ಮತ್ತು ತೆರಿಗೆಯಿಂದ ವಿನಾಯಿತಿ ಪಡೆದ ಮನೆಗಳನ್ನು ಎಣಿಕೆ ಮಾಡಿ ಅವನು ಪ್ರತಿಯೊಂದು ಹಳ್ಳಿಯಲ್ಲೂ ವಾಸಿಸುವ ನಾಲ್ಕು ವರ್ಗದ ಜನರ ಒಟ್ಟು ಸಂಖ್ಯೆಯನ್ನು ದಾಖಲುಮಾಡುವುದಲ್ಲದೆ ಕೃಷಿಗಾರರ ನಿಖರವಾದ ಸಂಖ್ಯೆ, ಗೋವಳರು, ವ್ಯಾಪಾರಿಗಳು, ಕೈಕಸಬಿನವರು, ಕೆಲಸಗಾರರು ಆಳುಗಳು ಮತ್ತು ದ್ವಿಪದಿ ಮತ್ತು ಚತುಷ್ಪಾದಿ ಪ್ರಾಣಿಗಳು ಇವುಗಳ ಲೆಕ್ಕವನ್ನಿಟ್ಟು ಜೊತೆಗೆ ಪ್ರತಿಯೊಂದು ಮನೆಯಿಂದ ಸಂಗ್ರಹಿಸಬಹುದಾದ ದಂಡಗಳು, ಸುಂಕ, ಶ್ರಮದಾನ, ಚಿನ್ನದ ಪ್ರಮಾಣಗಳನ್ನು ನಿಶ್ಚಯಿಸುವುದು.” (ಕೌಟಿಲ್ಯನ ಅರ್ಥಶಾಸ್ತ್ರದ ಅನುವಾದ) ಆರ್. ಶಾಮಾಶಾಸ್ತ್ರಿಗಳಿಂದ.

	ಬೇಸಾಯದ ಅಂಕಿ ಅಂಶಗಳ ಪ್ರಾಮುಖ್ಯ : ಬೇಸಾಯ ಮತ್ತು ಜಾನುವಾರುಗಳು ಇವಕ್ಕೆ ಸಂಬಂಧಿಸಿದ ಅಂಕಿ ಅಂಶಗಳ ಸಂಗ್ರಹ ಮತ್ತು ಸಂಸ್ಕರಣೆಗೆ ಈಚೆಗೆ ಬಹಳ ಪ್ರಾಮುಖ್ಯ ಬಂದಿದೆ. ಅಂಕಿ ಅಂಶಗಳ ವಿವರ, ಮುಖ್ಯವಾಗಿ ಕೃಷಿಗೆ ಯೋಗ್ಯವಾದ ಜಮೀನು. ವಿವಿಧ ಉದ್ದೇಶಗಳಿಗೆ ಉಪಯೋಗಿಸಲಾಗುವ ಭೂಮಿ, ಬೆಳೆದ ಪೈರುಗಳ ರಖಂ ಮತ್ತು ಅವುಗಳ ಪರಿಮಾಣ ಇವನ್ನು ಒಳಗೊಂಡಿರುತ್ತದೆ. ಮನುಷ್ಯ ಜೀವಿಸಲು ಅವನು ತೊಡಗಿರುವ ವ್ಯಾಪಾರ, ಉದ್ಯಮಗಳನ್ನು ಅಭಿವೃದ್ಧಿಗೊಳಿಸಲು ಇವು ಅವಶ್ಯಕ. ಉತ್ಪತ್ತಿಯ ಅಂಕಿ ಅಂಶಗಳ ವಿವರ ಹಾಗೂ ಅವುಗಳ ಬೆಲೆಗಳು ಅಮೂಲ್ಯ ದಾಖಲೆಗಳು. ಸುಗ್ಗಿಕಾಲಕ್ಕೆ ಬಹಳ ಮುಂಚಿತವಾಗಿಯೇ ಬೆಳೆಯ ಮುನ್ನಂದಾಜನ್ನು ಮಾಡುವುದು ಅಗತ್ಯ. ಬೇಸಾಯದ ಅಂಕಿ ಅಂಶಗಳ ವಿವರಗಳಲ್ಲಿ ಬೆಲೆಯ ಮುನ್ನಂದಾಜು ಒಂದು ಮುಖ್ಯ ಸ್ಥಾನವನ್ನು ಪಡೆದಿರುವುದು. ಇದಲ್ಲದೆ ಪರಿಪೂರ್ಣವಾದ ಮತ್ತು ಖಾತರಿಯಾದ ಅಂಕಿ ಅಂಶಗಳ ಸಂಗ್ರಹಕಾರ್ಯ ಸರ್ಕಾರ ತಕ್ಕ ಆಡಳಿತ ಕ್ರಮವನ್ನು ಅಳವಡಿಸಿಕೊಳ್ಳಲು ಮುಖ್ಯವಾದ ಸಾಧನ, ಬೇಸಾಯದ ಉತ್ಪತ್ತಿಯ ನಿಖರವಾದ ಅಂದಾಜನ್ನು ದೇಶದ ಲೋಕಕಲ್ಯಾಣಕಾರೀ ಆಹಾರ ಧೋರಣೆಗೆ ತಳಹದಿಯೆಂದು ಪರಿಗಣಿಸಲಾಗುತ್ತದೆ. ಸಂಗ್ರಹಿಸಲ್ಪಟ್ಟ ಅಂಕಿ ಅಂಶಗಳ ವಿವರಗಳ ನಿಖರತ್ವ ಹಾಗೂ ಅವುಗಳ ಆಧಾರದ ಮೇಲೆ ಗಣಿಸಲಾಗುವ ಅಂದಾಜುಗಳು ಮತ್ತು ಅವುಗಳಿಂದ ಮಾಡಲಾಗುವ ನಿರ್ಣಯಗಳ ಸಮಂಜಸತೆ - ಇವು ಮಾಹಿತಿಗಳನ್ನು ಸಂಗ್ರಹಿಸಲು ಅಳವಡಿಸಿದ ಕ್ರಮಗಳ ಕ್ಷಮತೆ ಮತ್ತು ಅಂಕಿಅಂಶಗಳನ್ನು ಸಂಕಲನಮಾಡಿ ವಿಶ್ಲೇಷಿಸಲು ಬಳಸಿದ ಕ್ರಮಗಳನ್ನು ಅವಲಂಬಿಸಿವೆ.

	ಸಂಗ್ರಹಿಸಿದ ಮಾಹಿತಿಗಳ ಸ್ವರೂಪ : ವ್ಯವಸಾಯದ ಅಂಕಿ ಅಂಶಗಳ ವಿವರಗಳನ್ನು ವರದಿಮಾಡುವ ಸಿಬ್ಬಂದಿಗಳು ಬಿತ್ತನೆಯಾದ ಭೂಮಿಯ ವಿಸ್ತೀರ್ಣ, ಎಕರೆಗೆ ಬೆಳೆಯ ಉತ್ಪತ್ತಿ ಇತ್ಯಾದಿಗಳೊಂದಿಗೆ ವ್ಯವಸಾಯದ ಹಲವಾರು ಮುಖಗಳ ವಿಷಯಗಳನ್ನು ಒದಗಿಸುವರು. ಇವನ್ನು ಹೊರಪಡಿಸುವ ಪ್ರಕಟಣೆಗಳು ಅಥವಾ ಸರ್ಕಾರದ ವರದಿಗಳಲ್ಲಿ ಕೊಡಲಾಗುವ ಹಲವು ವಿವರಗಳನ್ನು ಇಲ್ಲಿ ಸೂಚಿಸಬಹುದು.

	ಕ್ಷೇತ್ರದ ವರ್ಗೀಕರಣ : ಭೂಮಿಯ ಉಪಯೋಗ ಅಥವಾ ಬಳಕೆಗೆ ಅನುಸಾರವಾಗಿ ದೇಶದ ಒಟ್ಟು ಕೃಷಿ ಪ್ರದೇಶವನ್ನು ರಾಜ್ಯವಾರು ವಿಂಗಡಣೆಮಾಡಿ ಅಗ್ರಿಕಲ್ಚರಲ್ ಸ್ಟ್ಯಾಟಿಸ್ಟಿಕ್ಸ್ ಆಫ್ ಇಂಡಿಯ ಎಂಬ ಪತ್ರದಲ್ಲಿ (ಭಾರತದ ಕೃಷಿ ಅಂಕಿ ಅಂಶಗಳ ವಿವರ) ಒದಗಿಸಲಾಗಿದೆ. ಈ ಅಂಕಿಗಳನ್ನು ಅನಂತರ ಸ್ಟ್ಯಾಟಿಸ್ಟಿಕಲ್ ಆಬ್‍ಸ್ಟ್ರ್ಯಾಕ್ಟ್ ಆಫ್ ಇಂಡಿಯನ್ ಯೂನಿಯನ್ ಎಂಬ ಪತ್ರದಲ್ಲಿ (ಇಂಡಿಯನ್ ಯೂನಿಯನ್ನಿನ ಅಂಕಿ ಅಂಶಗಳ ಗೋಷ್ವಾರೆ) ಎತ್ತಿ ಬರೆಯಲಾಗುತ್ತದೆ. ಕೆಳಗೆ ಕಾಣಿಸಿದಂತೆ ಬೇರೆ ಬೇರೆ ತರದ ಭೂಮಿಗಳ ಲೆಕ್ಕವನ್ನು ಸಂಗ್ರಹಿಸಲಾಗುತ್ತದೆ. 1. ಹಳ್ಳಿಗಳ ದಾಖಲೆ ಪತ್ರಗಳಿಗೆ ಅನುಸಾರವಾಗಿ ಅಂದರೆ ಹಂಗಾಮಿ ಗುತ್ತಿಗೆಯ ಪ್ರದೇಶಗಳಲ್ಲಿನ ಪಟವಾರಿ, ಶ್ಯಾನುಭೋಗ ಅಥವಾ ಕರಣಿಕರು ಅಥವಾ ಜಮಾಬಂದಿಯ ಅಧಿಕಾರಿಗಳ ದಾಖಲೆಗೆ ಅನುಸಾರವಾಗಿ ಮತ್ತು ಖಾಯಂ ಗುತ್ತಿಗೆ ಪ್ರದೇಶಗಳಲ್ಲಿ ಮೋಜಣಿಗೆ ಅನುಸಾರವಾಗಿ ವಿಸ್ತೀರ್ಣ. 2. ಸರ್ಕಾರಿ ಮತ್ತು ಖಾಸಗಿ ಕಾಡು ಪ್ರದೇಶಗಳು. 3. ಕೃಷಿ ಮಾಡಲು ದೊರೆಯದ ಪ್ರದೇಶಗಳು. ಉದಾಹರಣೆಗೆ ರಸ್ತೆಗಳು, ಹೊಂಡಗಳು, ಕೆರೆ ಕುಂಟೆಗಳು, ಸಣ್ಣ ಹೊಳೆಗಳು ಕಾಲುವೆಗಳು, ಕಟ್ಟಡಗಳು ಹಲ್ಲುಗಾವಲುಗಳು ಇತ್ಯಾದಿ. ಈ ಬಾಬುಗಳಿಗಾಗಿ ಉತ್ತಾರ ಮಾಡುವ ಬಗ್ಗೆ ನಿಯಮಗಳು ಎಲ್ಲ ವರದಿಗಳಲ್ಲೂ ಒಂದೇ ಸಮವಾಗಿ ಇರುವುದಿಲ್ಲವೆಂಬುದನ್ನು ಗಮನಿಸಬೇಕು. ಇದರಿಂದಾಗಿ ಅವನ್ನು ಹೋಲಿಸಲು ಸಾಧ್ಯವಾಗುವುದಿಲ್ಲ, 4. ಪ್ರಚಲಿತ ಬೀಳುಬಿದ್ದ ಜಮೀನುಗಳು. ಇವು ಒಂದು ನಿಶ್ಚಿತ ಅವಧಿಯವರೆಗೆ ಬೀಳು ಬಿಟ್ಟ ಕೃಷಿಯೋಗ್ಯವಾದ ಪ್ರದೇಶಗಳನ್ನು ಸೂಚಿಸುವುವು. ರಾಜ್ಯದಿಂದ ರಾಜ್ಯಕ್ಕೆ ಈ ಅವಧಿ ಬದಲಾಯಿಸುವುದು. ಇದನ್ನು 2 ವರ್ಷಗಳಾಗಿ ಒಂದು ರಾಜ್ಯದಲ್ಲಿ ತೆಗೆದುಕೊಂಡರೆ ಮತ್ತೊಂದು ರಾಜ್ಯದಲ್ಲಿ 10 ವರ್ಷಗಳಾಗಿ ತೆಗೆದುಕೊಳ್ಳುತ್ತಿದ್ದರು. ಈ ವ್ಯತ್ಯಾಸಗಳಿಂದ ಭಾರತದಲ್ಲಿ ಒಂದು ವರ್ಷದಲ್ಲಿ ಒಟ್ಟಾರೆ ಕೃಷಿಗೊಳಗಾದ ಭೂಮಿಯ ಪರಿಮಾಣವನ್ನು ಕುರಿತು ಸಾಧಾರಣವಾದ ನಿರ್ಣಯವನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ.

	ಒಂದೇ ವಿಧವಾಗಿ ವರ್ಗೀಕರಣ ಮಾಡುವುದು ಒಳ್ಳೆಯದು ಮತ್ತು ಹಾಗೆ ಮಾಡುವುದರಿಂದ ಒಂದು ವರ್ಷದ ಸ್ಥಿತಿಯನ್ನು ಮತ್ತೊಂದು ವರ್ಷದ ಸ್ಥಿತಿಯೊಡನೆ ಅಥವಾ ಒಂದು ರಾಜ್ಯದ ಸ್ಥಿತಿಯನ್ನು ಮತ್ತೊಂದು ರಾಜ್ಯದ ಸ್ಥಿತಿಯೊಡನೆ ಹೋಲಿಸಲು ಸಾಧ್ಯವಾಗುವುದು. ಪ್ರಚಲಿತ ವರ್ಗೀಕರಣ ಕ್ರಮ ಹೀಗಿರುವುದು :
1. ಚಾಲ್ತಿ ಬೀಳು ಜಮೀನುಗಳು	...	1 ವರ್ಷ ಬೀಳು ಬಿದ್ದ ಜಮೀನು
2. ಇತರ ಬೀಳು ಜಮೀನುಗಳು ...	2. ಇತರ ಬೀಳು ಜಮೀನುಗಳು  ...   	1 ವರ್ಷಕ್ಕಿಂತ ಹೆಚ್ಚು ಮತ್ತು 5 ವರ್ಷಗಳಿಗಿಂತ ಹೆಚ್ಚಲ್ಲದ್ದು
3. ಕೃಷಿಯೋಗ್ಯವಾದ ಬಂಜರು ...	3. ಕೃಷಿಯೋಗ್ಯವಾದ ಬಂಜರು  ...    5 ವರ್ಷಗಳಿಗೆ ಮೇಲ್ಪಟ್ಟ ಬೀಳು ಜಮೀನುಗಳು

ಇದರಿಂದ ರಾಜ್ಯವಾರು ಅಂಕಿಗಳನ್ನು ಸುಲಭವಾಗಿ ಹೋಲಿಸಲು ಸಾಧ್ಯವಾಗುವುವು ಮತ್ತು ಒಟ್ಟು ದೇಶದ ಸ್ಥಿತಿಗತಿಯ ನಿಖರವಾದ ಚಿತ್ರವನ್ನು ಪಡೆಯಲು ಸಹಾಯವಾಗುವುದು.

	ಕೃಷಿಯೋಗ್ಯವಾದ ಬಂಜರು ಭೂಮಿ : ಇದು ಕೃಷಿಗೆ ಯೋಗ್ಯವಾದ ಆದರೆ ಬೇಸಾಯ ಮಾಡದೆ ಬಿಟ್ಟಿರುವ ಮತ್ತು ಐದು ವರ್ಷಗಳಿಗಿಂತ ಹೆಚ್ಚು ಬೀಳುಬಿಟ್ಟ ಭೂಮಿಗಳು, ತೋಪುಗಳನ್ನೊಳಗೊಂಡ ಪ್ರದೇಶ, ಬಿದಿರು ಮತ್ತು ಹುಲ್ಲು ಬೆಳೆವ ಪ್ರದೇಶಗಳನ್ನು (ಅರಣ್ಯದಲ್ಲಿ ಸೇರ್ಪಡೆಯಾಗದಿದ್ದಾಗ) ಸೂಚಿಸುವುದು.

	ವಿವಿಧ ಬೆಳೆಗಳ ಸಾಗುವಳಿ ಪ್ರದೇಶ : ವಿವಿಧ ಬೆಳೆಗಳನ್ನು ಸಾಗುವಳಿ ಮಾಡುವ ಪ್ರದೇಶಗಗಳಿಗೆ ಸಂಬಂಧಪಟ್ಟ ಅಂಕಿಅಂಶಗಳ ವಿವರಗಳನ್ನು ಅಗ್ರಿಕಲ್ಚರಲ್ ಸ್ಟ್ಯಾಟಿಸ್ಟಿಕ್ಸ್ ಆಬ್‍ಸ್ಟ್ರ್ಯಾಕ್ಟ್ಸ್ ಆಫ್ ದಿ ಇಂಡಿಯನ್ ಯೂನಿಯನ್ ಎಂಬುದರಲ್ಲಿ ಮತ್ತೆ ಕೊಡಲಾಗುವುದು. ಅಕ್ಕಿ, ಗೋದಿ, ಬಾರ್ಲಿ, ಜೋಳ, ಬಾಜ್ರ, ಮೆಕ್ಕೆ ಜೋಳ, ರಾಗಿ, ಕಬ್ಬು, ಬೇಳೆಗಳು, ಕಡೆಲೆಕಾಯಿ, ಹತ್ತಿ, ಸೆಣಬು, ಹೊಗೆಸೊಪ್ಪು, ಅಗಸೆಬೀಜ, ಎಳ್ಳು, ರೇಪ್ ಎನ್ನುವ ಎಣ್ಣೆಬೀಜ, ಮತ್ತು ಸಾಸಿವೆಕಾಳು, ಹರಳು ಬೀಜ, ಕಾಫಿ, ಟೀ, ರಬ್ಬರ್, ಮೇವು ಹುಲ್ಲು, ಹಣ್ಣುಗಳು, ಗೆಡ್ಡೆ ಗೆಣಸುಗಳು, ತರಕಾರಿ ಮುಖ್ಯವಾದ ಬೆಳೆಗಳು. ಬಿತ್ತನೆ ವಿಸ್ತೀರ್ಣವನ್ನು ಲೆಕ್ಕ ಹಾಕುವಾಗ ಒಂದು ವರ್ಷದಲ್ಲಿ ಒಂದಕ್ಕಿಂತ ಹೆಚ್ಚು ಬೆಳೆ ತೆಗೆಯುವ ಭೂಮಿಯನ್ನು ಒಂದೇ ಬಾರಿ ಎಣಿಕೆ ಮಾಡಲಾಗುತ್ತದೆ. ಆದರೆ ಪ್ರತಿಯೊಂದು ಬೆಳೆ ತೆಗೆಯುವ ಜಮೀನಿನ ವಿಸ್ತೀರ್ಣವನ್ನು ಲೆಕ್ಕಹಾಕುವಾಗ ಪ್ರತಿಸಲವೂ ಅಂಥ ವಿಸ್ತೀರ್ಣವನ್ನು ಆಯಾ ಬೆಳೆಗೆ ಅನುಸಾರವಾಗಿ ಒಂದಕ್ಕಿಂತ ಹೆಚ್ಚು ಸಲ ಲೆಕ್ಕಕ್ಕೆ ಸೇರಿಸಿಕೊಳ್ಳಲಾಗುವುದು.

	ನೀರಾವರಿ ಸಾಗುವಳಿ ಪ್ರದೇಶ : 1. ಕಾಲುವೆಗಳು, 2. ಕೆರೆಗಳು, 3. ಬಾವಿಗಳು, 4. ಇತರ ಆಸರೆಗಳಿಂದ ಹಾಗೂ ವಿವಿಧ ನೀರಾವರಿ ಬೆಳೆಗಳ ಪೈರಾಗುವ ಜಮೀನಿನ ವಿಸ್ತೀರ್ಣಗಳ ರಾಜ್ಯವಾರು ವಿವರಗಳು. ಇವು ಎಸ್ಟಿಮೇಟ್ಸ್ ಆಫ್ ಏರಿಯ ಅಂಡ್ ಯೀಲ್ಡ್ ಆಫ್ ಪ್ರಿನ್ಸಿಪಲ್ ಕ್ರಾಪ್ಸ್ ಇನ್ ಇಂಡಿಯ (ಭಾರತದ ಮುಖ್ಯ ಬೆಳೆಗಳ ಉತ್ಪತ್ತಿ ಮತ್ತು ವಿಸ್ತೀರ್ಣದ ಅಂದಾಜುಗಳು) ಎಂಬ ವಾರ್ಷಿಕ ಪ್ರಕಟಣೆಯಲ್ಲಿ ದೊರೆಯುತ್ತವೆ. ಈ ಅಂಕಿಗಳನ್ನು ಅಂಕಿಸಂಖ್ಯೆಗಳ ಗೋಷ್ವಾರೆಯಲ್ಲೂ ಸೇರಿಸಲಾಗುವುದು. ಇರಿಗೇಷನ್ ಇನ್ ಇಂಡಿಯ (ಭಾರತದಲ್ಲಿ ನೀರಾವರಿ) ಎಂಬ ವಾರ್ಷಿಕ ಪ್ರಕಟನೆ ಇವನ್ನಲ್ಲದೆ ಸಂಬಂಧಪಟ್ಟ ಇತರ ಕೆಲವು ಮಾಹಿತಿಗಳನ್ನೂ ಒದಗಿಸುತ್ತದೆ. ಸರ್ಕಾರದ ಕಾಲುವೆಗಳ ಬಗ್ಗೆ ಅವಕ್ಕೆ ತಗಲಿರುವ ಬಂಡವಾಳ, ಸಂರಕ್ಷಣೆಯ ವೆಚ್ಚ, ಸಮಗ್ರ ಆದಾಯಗಳು, ಬೆಳೆಗಳ ಒಟ್ಟು ಉತ್ಪತ್ತಿ ನೀರಾವರಿ ಜಮೀನು ಮತ್ತು ನೀರಾವರಿ ಜಮೀನಿನ ಒಟ್ಟು ಉತ್ಪತ್ತಿ ಮುಂತಾದ ವಿವರಗಳು ಅದರಲ್ಲಿ ದೊರೆಯುವುವು.

	ಬೆಳೆಗಳ ಹುಟ್ಟುವಳಿ : ಸಂಗ್ರಹಿಸಲಾಗುವ ಮಾಹಿತಿಗಳಲ್ಲಿ ಇದು ಅತ್ಯಂತ ಮುಖ್ಯವಾದ ಬಾಬ್ತು. ಉತ್ಪಾದನೆಯ ಅಂಕಿಗಳನ್ನು ಭಾರತದಲ್ಲಿ ಮುಖ್ಯ ಬೆಳೆಗಳ ಉತ್ಪತ್ತಿ ಮತ್ತು ವಿಸ್ತೀರ್ಣದ ಅಂದಾಜುಗಳು ಎಂಬ ಪ್ರಕಟಣೆಯಲ್ಲಿ ಕೊಟ್ಟಿದೆ. ಪ್ರಧಾನ ಬೆಳೆಗಳು ಬೆಳೆಯುವ ಪ್ರದೇಶದ ಪಂಚವಾರ್ಷಿಕ ಸರಾಸರಿಯನ್ನು ಮತ್ತು ಉತ್ಪತ್ತಿ ಹಾಗೂ ಅದಕ್ಕೆ ಸಂಬಂಧಪಟ್ಟ ವಾರ್ಷಿಕ ಅಂಕಿಅಂಶಗಳನ್ನು ಈ ಪ್ರಕಟಣೆ ಕೊಡುವುದು. ಸರ್ಕಾರದ ವಾಣಿಜ್ಯ ವರ್ತಮಾನ ಮತ್ತು ಅಂಕಿ ಅಂಶಗಳ ಖಾತೆ ಅಕ್ಕಿ, ಗೋಧಿ, ಕಬ್ಬು, ಹತ್ತಿ, ಎಣ್ಣೆಬೀಜ ಇತ್ಯಾದಿ ಮುಖ್ಯ ಬೆಳೆಗಳಿಗೆ ಸ್ಥಳೀಯ ವಿವರಗಳ ಆಧಾರದ ಮೇಲೆ ಮತ್ತು ಪ್ರತಿವರ್ಷ ಪ್ರತಿಫಸಲಿನ ಕಾಲದ ಕೊನೆಯಲ್ಲಿ ಸುಗ್ಗಿಯ ಮೊದಲು ಮುಂದಾಜು ಅಥವಾ ಮುನ್‍ಸೂಚನೆಯ ವಿವರಗಳನ್ನು ಹೊರಡಿಸುವುದು. ಟೀ ಕಾಫಿ ಮತ್ತು ರಬ್ಬರ್‍ಗಳನ್ನು ಕುರಿತು ಖಾತೆ ವಿಶೇಷ ಪ್ರಕಟಣೆಗಳನ್ನು ಹೊರಡಿಸುವುದು. ಇದೇ ವಿವರಗಳನ್ನು ಭಾರತದಲ್ಲಿ ಮುಖ್ಯ ಬೆಳೆಗಳ ವಿಸ್ತೀರ್ಣ ಮತ್ತು ಉತ್ಪತ್ತಿಯ ಅಂದಾಜುಗಳು ಎಂಬ ಪ್ರಕಟಣೆಯಲ್ಲಿ ನಕಲು ಮಾಡುತ್ತಾರೆ. ಸೆಣಬಿನ ಅಂಕಿಗಳನ್ನು ಪಶ್ಚಿಮ ಬಂಗಾಳದ ವ್ಯವಸಾಯದ ನಿರ್ದೇಶಕರು ಪ್ರಕಟಿಸುವ ಅಂತಿಮ ಮುನ್ಸೂಚನೆಯಿಂದ ಉದ್ಧರಿಸಿ ಬರೆಯುತ್ತಾರೆ. ಬೆಳೆಯ ಉತ್ಪತ್ತಿಯನ್ನು ಅಂದಾಜುಮಾಡಲು ಬಳಸುವ ಸೂತ್ರ ಹೀಗಿದೆ :

	ಉತ್ಪತ್ತಿ = ವಿಸ್ತೀರ್ಣ*ಶಿಷ್ಟ ಪ್ರಸಾಮಾನ್ಯ ಉತ್ಪತ್ತಿ * ಸ್ಥಿತಿಗತಿಗುಣಾಂಕ

	ಭಾರತದಲ್ಲಿನ ಪ್ರಧಾನ ಬೆಳೆಗಳ ಸರಾಸರಿ ಉತ್ಪತ್ತಿ : ಫಸಲಿನ ಕಟಾವಿನ ಪ್ರಯೋಗಗಳ ಫಲಗಳಿಂದ ಎಕರೆಗೆ ಸರಾಸರಿ ಉತ್ಪತ್ತಿಯನ್ನು ಸಾಮಾನ್ಯವಾಗಿ ಪಡೆದು ವ್ಯವಸಾಯದ ನಿರ್ದೇಶಕರ ಸ್ವಂತ ತೀರ್ಮಾನಕ್ಕೆ ಅನುಸಾರವಾಗಿ ಅದನ್ನು ಸರಿಹೊಂದಿಸಲಾಗುವುದು. ಶಿಷ್ಟ ಫಲದ ಅಂಕಿಗಳನ್ನು ಭಾರತದಲ್ಲಿ ಪ್ರಧಾನ ಬೆಳೆಗಳ ಎಕರೆಗೆ ಸರಾಸರಿ ಉತ್ಪತ್ತಿಯ ಪಂಚವಾರ್ಷಿಕ ವರದಿಯಲ್ಲಿ ಪ್ರಕಟಿಸುತ್ತಾರೆ. ಇವು 5 ವರ್ಷಗಳವರೆಗೆ ಜಾರಿಯಲ್ಲಿರುತ್ತವೆ. ಭಾರತದ ಬೇಸಾಯದ ಅಂಕಿ ಅಂಶಗಳು ಎಂಬ ಪ್ರಕಟಣೆಯ ಪುರವಣಿಯಲ್ಲೂ ಈ ಅಂಕಿಗಳನ್ನು ಕೊಟ್ಟಿರುವರು.

	ಸುಗ್ಗಿಯ ಕಾಲದ ಧಾರಣೆವಾಸಿಗಳು : ಜಿಲ್ಲೆಗಳ ಕೆಲವು ಮುಖ್ಯವಾದ ಬೆಳೆಗಳ ಸುಗ್ಗಿಯ ಕಾಲದ ಜಿಲ್ಲಾವಾರು ಧಾರಣೆವಾಸಿಗಳನ್ನು ವಾಣಿಜ್ಯ ವರ್ತಮಾನ ಮತ್ತು ಅಂಕಿಸಂಖ್ಯೆಗಳ ಖಾತೆಯವರು ಭಾರತದ ಬೇಸಾಯದ ಅಂಕಿ ಅಂಶಗಳು ಎಂಬುದರಲ್ಲಿ ಪ್ರಕಟಿಸುವರು. ಇಲ್ಲಿ ಸಹ ಅನುಸರಿಸಲಾಗುವ ಕ್ರಮಗಳು ಒಂದೇ ಸಮವಾಗಿಲ್ಲ. ಕೆಲವು ಜಿಲ್ಲೆಗಳು ಒಟ್ಟು ಮಾರಾಟ ದರವನ್ನು ಒದಗಿಸಿದರೆ ಮತ್ತೆ ಕೆಲವು ಸುಗ್ಗಿ ಕಾಲದಲ್ಲಿ ರೂಢಿಯಲ್ಲಿರುವ ಚಿಲ್ಲರೆ ದರವನ್ನು ಕೊಡುತ್ತವೆ. ಸುಗ್ಗಿಯ ದರದ ಅರ್ಥದಲ್ಲಿ ಹೀಗೆ ವ್ಯತ್ಯಾಸವಿದ್ದರೆ ಸಾಮ್ಯ ದೊರೆಯುವುದಿಲ್ಲ. ಒಂದು ಸುಗ್ಗಿಯ ಅವಧಿಯಲ್ಲಿ ಹಳ್ಳಿಯ ನಿವೇಶನದಲ್ಲಿ ಒಟ್ಟು ಮಾರಾಟಗಾರನಿಗೆ ಉತ್ಪಾದಕನಿಂದ ಕೊಡಲಾಗುವ ಸರಕಿನ ಬೆಲೆಯನ್ನು ಸುಗ್ಗಿಯ ಕಾಲದ ಧಾರಣೆ ಎಂದು ವ್ಯಾಖ್ಯಿಸಬಹುದು. ಆದ್ದರಿಂದ ಈ ಸಲಹೆಗೆ ಅನುಸಾರವಾಗಿ ಪ್ರತಿಯೊಂದು ವಾರದ ಯಾವುದಾದರೂ ನಿಶ್ಚಿತ ದಿನದಲ್ಲಿ ಹಳ್ಳಿಯ ನಿವೇಶನದ ಬಳಿ ಉತ್ಪಾದಕನಿಂದ ಒಟ್ಟು ಮಾರಾಟಗಾರರಿಗೆ ಮಾರಲಾಗುವ ಸರಕಿನ ಬೆಲೆಗಳನ್ನು ದಾಖಲು ಮಾಡಬೇಕು ಮತ್ತು ಸುಗ್ಗಿಯ ತರುವಾಯ ಸುಮಾರು 6 ವಾರಗಳಲ್ಲಿನ ಸರಾಸರಿಯನ್ನು ಸರಕಿನ ಸುಗ್ಗಿಯ ಬೆಲೆ ಎಂದು ತೆಗೆದುಕೊಳ್ಳಬೇಕು.

	ಟೀ. ಕಾಫಿ ಮತ್ತು ರಬ್ಬರುಗಳ ಅಂಕಿ ಅಂಶಗಳು : ಟೀ, ಕಾಫಿ ಮತ್ತು ರಬ್ಬರುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವಾಣಿಜ್ಯ ವರ್ತಮಾನ ಮತ್ತು ಅಂಕಿ ಅಂಶಗಳ ಖಾತೆಯ ವಿಶೇಷ ಪ್ರಕಟಣೆಗಳಿಂದ ತಿಳಿಯಲಾಗುವುದು. ಇವು ಇಂಡಿಯನ್ ಟೀ ಸ್ಟ್ಯಾಟಿಸ್ಟಿಕ್ಸ್ (ಭಾರತದ ಟೀಯ ಅಂಕಿ ಅಂಶಗಳು), ಇಂಡಿಯನ್ ಕಾಫಿ ಸ್ಟ್ಯಾಟಿಸ್ಟಿಕ್ಸ್ (ಭಾರತದ ಕಾಫಿಯ ಅಂಕಿ ಅಂಶಗಳು) ಮತ್ತು ಇಂಡಿಯನ್ ರಬ್ಬರ್ ಸ್ಟ್ಯಾಟಿಸ್ಟಿಕ್ಸ್ (ಭಾರತದ ರಬ್ಬರಿನ ಅಂಕಿ ಅಂಶಗಳು). ಇವುಗಳ ಮೂಲಕ ಒದಗಿಸಲಾಗುವ ಮಾಹಿತಿಗಳು : 1. ಕೃಷಿ ಮಾಡಲಾದ ವಿಸ್ತೀರ್ಣ ಮತ್ತು ಹುಟ್ಟುವಳಿಯ ಪರಿಮಾಣ. 2. ತೋಟಗಳಲ್ಲಿ (ಕಾನುಗಳಲ್ಲಿ) ಶಾಶ್ವತವಾಗಿ ಮತ್ತು ತಾತ್ಕಾಲಿಕವಾಗಿ ನೇಮಿಸಲಾದ ಕೆಲಸಗಾರರ ಸರಾಸರಿ ಸಂಖ್ಯೆ. 3. ಕೆಲಸಗಾರರ ಸರಾಸರಿ ತಿಂಗಳ ಕೂಲಿ-ಗಂಡಸರಿಗೆ, ಹೆಂಗಸರಿಗೆ ಮತ್ತು ಮಕ್ಕಳಿಗೆ ಪ್ರತ್ಯೇಕವಾಗಿ. 4. ಸರಾಸರಿ ಬೆಲೆ-ಹರಾಜಿನಲ್ಲಿ. 5. ರಫ್ತು ಮತ್ತು ಆಮದುಗಳ ಅಂಕಿಗಳು.

	ಪಶುಧನ ಅಥವಾ ಜಾನುವಾರುಗಳ ಅಂಕಿ ಅಂಶಗಳು : ಜಾನುವಾರುಗಳ ಗಣತಿಯನ್ನೂ ಬೇಸಾಯದ ಮುಟ್ಟುಗಳ ಗಣತಿಯನ್ನೂ 5 ವರ್ಷಕ್ಕೊಮ್ಮೆ ಮಾಡಲಾಗುವುದು. ಆಹಾರ ಮತ್ತು ವ್ಯವಸಾಯದ ಮಂತ್ರಿಯ ಖಾತೆಗೆ ಸೇರಿದ ಆರ್ಥಿಕ ಮತ್ತು ಸಾಂಖ್ಯಕೀಯ ನಿರ್ದೇಶನಾಲಯದಲ್ಲಿ ಇವುಗಳನ್ನು ಕ್ರೋಡೀಕರಿಸಿ ಪ್ರಕಟಿಸಲಾಗುವುದು. ಕೆಳಗೆ ಕೊಟ್ಟಿರುವ ಶೀರ್ಷಿಕೆಗಳ ಕೆಳಗೆ ಮಾಹಿತಿಗಳನ್ನು ಸಾಮಾನ್ಯವಾಗಿ ಸಂಗ್ರಹಿಸುತ್ತಾರೆ :

	1. ದನಕರುಗಳ ಸಂಖ್ಯೆ : ಗಂಡು, ಹೆಣ್ಣು ಮತ್ತು ಸಣ್ಣಕರು ಎಂದು ವರ್ಗೀಕರಣ ಮಾಡಲಾಗಿದೆ. 1 ತಳಿಯೆಬ್ಬಿಸಲು ಬೇಕಾದ ಪ್ರಾಣಿಗಳು, ಬೀಜದ ಹೋರಿಗಳು, 2 ಕೆಲಸಕ್ಕೆ ಒದಗುವ ಪ್ರಾಣಿಗಳು, 3 ಉಳಿದವುಗಳು-ಎಂದು ಪುನಃ ವಿಭಾಗಿಸಲಾಗುತ್ತದೆ.
	2. ಕುರಿ ಮತ್ತು ಮೇಕೆಗಳ ಸಂಖ್ಯೆ
	3. ಕುದುರೆಗಳು ಮತ್ತು ಸಣ್ಣ ತಟ್ಟುಗಳ ಸಂಖ್ಯೆ ಇವನ್ನು ಗಂಡುಕುದುರೆಗಳು. ಹೆಣ್ಣುಕುದುರೆಗಳು, ಒಂದು ವರ್ಷ ವಯಸ್ಸಿನ ಒಳಗಿರುವ ಮರಿಗಳು ಮತ್ತು ಇತರ ಮರಿಗಳು ಎಂದು ಪುನಃ ವಿಂಗಡಿಸಲಾಗಿದೆ.
	4. ಕತ್ತೆಗಳು, ಹೇಸರಕತ್ತೆಗಳು ಮತ್ತು ಒಂಟೆಗಳ ಸಂಖ್ಯೆ.
	5. ನೇಗಿಲು ಮತ್ತು ಗಾಡಿಗಳ ಸಂಖ್ಯೆ ಇತ್ತೀಚೆಗೆ ಹಂದಿಗಳು ಮತ್ತು ಕೋಳಿಗಳ ಸಂಖ್ಯೆಯನ್ನೂ ಗಣತಿಯಲ್ಲಿ ಸೇರಿಸಲಾಗಿದೆ.
	ಎಲ್ಲ ರಾಜ್ಯಗಳಲ್ಲಿಯೂ ಗಣತಿಯ ಕಾಲ, ವಿಧಾನ ಒಂದೇ ಆಗಿಲ್ಲದಿರುವುದು ಒಂದು ಕೊರತೆ. ಉದಾಹರಣೆಗೆ ಇತರ ರಾಜ್ಯಗಳಲ್ಲಿ 1961ನೆಯ ಇಸವಿಯ ಏಪ್ರಿಲ್ ತಿಂಗಳಲ್ಲಿ ಎಣಿಕೆ ನಡೆದುವು ; ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅದೇ ಇಸವಿ ನವೆಂಬರಿನಲ್ಲಿ ಜಾನುವಾರು ಗಣತಿ ನಡೆಯಿತು. ಕೆಲವು ವೇಳೆ ದನಕರುಗಳ ಜಾತ್ರೆ ಮಧ್ಯ ಸಂಭವಿಸುವುದು. ಆಗ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಅಥವಾ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ದನ ಕರುಗಳು ವಲಸೆ ಹೋಗುವುವು. ಎಣಿಕೆಯ ವಿಧಾನದಲ್ಲಿ ಸಮಾನತೆ ತರುವುದರಿಂದ ಮತ್ತು ಎಲ್ಲ ರಾಜ್ಯಗಳಲ್ಲೂ ಏಕಕಾಲದಲ್ಲಿ ಗಣತಿಯನ್ನು ನಡೆಸುವುದರಿಂದ ಈ ನ್ಯೂನತೆಗಳನ್ನು ಸುಲಭವಾಗಿ ಪರಿಹರಿಸಬಹುದು. ಸರ್ಕಾರಿ ಆಕಳುವಾಡಿಗಳಿಂದ ಸಾರ್ವಜನಿಕರಿಗೆ ನೀಡಲಾದ ಆಕಳು, ಹೋರಿಗಳು, ಕೋಣಗಳು, ಎಮ್ಮೆಗಳು ಮತ್ತು ಕರುಗಳು-ಇವುಗಳ ಅಂಕಿ ಸಂಖ್ಯೆಗಳನ್ನು ಸಹ ಸಂಗ್ರಹಿಸಲಾಗುವುದು. ಇದರೊಂದಿಗೆ ಪಶುವೈದ್ಯ ಶಾಲೆಗಳು ಮತ್ತು ಚಿಕಿತ್ಸಾಲಯಗಳಿಗೆ ಸಂಬಂಧಪಟ್ಟ ಅಂಕಿಗಳು, ಚಿಕಿತ್ಸೆಗೊಳಗಾದ ಪ್ರಾಣಿಗಳ ಸಂಖ್ಯೆ ಮತ್ತು ಹಲವಾರು ಅಂಟು ರೋಗಗಳಿಂದ ಮೃತಪಟ್ಟ ದನಕರುಗಳ ಮರಣದಾಖಲೆಗಳು ಸಹ ದೊರೆಯುತ್ತವೆ. ದನಕರುಗಳು, ಕುರಿಗಳು ಮತ್ತು ಕುದುರೆಗಳು, ಕೋಳಿ ಮತ್ತು ಜೇನು ಸಾಕಣೆಗಳ ಪೋಷಣೆಯ ಅಭಿವೃದ್ಧಿಯಲ್ಲಿ ಸಾಧಿಸಿದ ಪ್ರಗತಿಯನ್ನು ತೋರಿಸುವ ಅಂಕಿ ಅಂಶಗಳನ್ನು ಸಹ ಸಂಗ್ರಹಿಸಲಾಗುತ್ತದೆ.

	ಎಕರೆಯ ಲೆಕ್ಕದ ಅಂಕಿ ಅಂಶಗಳು : ರೈತವಾರಿ ಪ್ರದೇಶಗಳಲ್ಲಿ ವಿಸ್ತೀರ್ಣಕ್ಕೆ ಸಂಬಂಧಿಸಿದ ಅಂಕಿ ಅಂಶಗಳನ್ನು (ಬೇಸಾಯದ ಇತರ ಅಂಕಿ ಅಂಶಗಳನ್ನು ಸಹ) ಹಳ್ಳಿಯ ಶಾನುಭೋಗರು ಒದಗಿಸಿಕೊಡುತ್ತಾರೆ. ಇವರು ತಮ್ಮ ಹಳ್ಳಿಯ ಹೊಲಗದ್ದೆಗಳಿಗೆ ಭೇಟಿಕೊಟ್ಟು ನೇರವಾಗಿ ಎಣಿಕೆಮಾಡಿ ಮಾಹಿತಿಗಳನ್ನು ಸಂಗ್ರಹಿಸುವರು. ಖಾಯಂ ಗುತ್ತಾ ಸ್ಥಳಗಳಲ್ಲಿ ಈ ಅಂಕಿ ಅಂಶಗಳ ವಿವರಗಳನ್ನು ಸಂಗ್ರಹಿಸಬಲ್ಲ ದ್ರವ್ಯಖಾತೆಯು ಹಳ್ಳಿಯ ಅಧಿಕಾರಿಗಳಿಗಿರುವುದಿಲ್ಲ. ಇನ್ನೂ ಕೆಲವು ರಾಜ್ಯಗಳಲ್ಲಿ ಅಳತೆಮಾಡದ ಮತ್ತು ಮೋಜಣಿಯಾಗದ ಪ್ರದೇಶಗಳಿವೆ. ಆ ಪ್ರದೇಶಗಳಲ್ಲಿನ ಹಲವಾರು ಬೆಳೆಗಳ ಎಕರೆವಾರು ಲೆಕ್ಕದ ಅಂದಾಜುಗಳು ಕೇವಲ ಊಹೆಗಳಲ್ಲದೆ ಮತ್ತೇನೂ ಅಲ್ಲ. ಭಾರತದಲ್ಲಿ ಬೇಸಾಯದ ಅಂಕಿ ಅಂಶಗಳ ಸಂಪೂರ್ಣ ಎಣಿಕೆಯಾಗುವ ಪ್ರದೇಶ ಮತ್ತು ಸಾಧಾರಣ ಅಂದಾಜುಗಳುಳ್ಳ ಪ್ರದೇಶ ಇವುಗಳ ಅನುಪಾತ ಈ ರೀತಿ ಇದೆ (ಸಂಖ್ಯೆಗಳು ದಶಲಕ್ಷ ಎಕರೆಗಳನ್ನು ಸೂಚಿಸುತ್ತವೆ) :
					ಪೂರ್ಣ ಎಣಿಕೆ 		ಅಂದಾಜು ಮಾಡಲಾದದ್ದು	ಒಟ್ಟು
	ರೈತವಾರಿ ಪ್ರದೇಶಗಳು		232			87				319
	ಖಾಯಂ ಗುತ್ತಾ ಪ್ರದೇಶಗಳು 	-			83				83
	(ಮಾಜಿ)ದೇಶೀಯ ಸಂಸ್ಥಾನಗಳು	145			10				155

			ಒಟ್ಟು		377			180				557
ಎಕರೆ ಪ್ರಕಾರ ಅಂಕಿ ಅಂಶಗಳ ವಿವರಗಳ ಬಗ್ಗೆ, ಮುಂದಿನ ಅಂಶಗಳನ್ನು ಗಮನದಲ್ಲಿಡಬೇಕು : 1. ಪ್ರತಿಯೊಂದು ಬೆಳೆಯ ಕೆಳಗೆ ವರದಿಮಾಡಿರುವ ವಿಸ್ತೀರ್ಣ ಕೇವಲ ಬಿತ್ತನೆಯ ವಿಸ್ತೀರ್ಣವನ್ನು ಪ್ರತಿನಿಧಿಸುತ್ತಲ್ಲದೆ ಫಸಲು ಕಟಾವು ಮಾಡಿದ ವಿಸ್ತಿರ್ಣವನ್ನಲ್ಲ.

 	2.	ಬೇಸಾಯದ ಅಂಕಿ ಅಂಶಗಳನ್ನು ಬೇಸಾಯವರ್ಷ ಅಂದರೆ ಜುಲೈಯಿಂದ ಜೂನ್ ವರೆಗೆ ಕೊಟ್ಟರೆ ರಫ್ತು ಅಂಕಿಗಳನ್ನು ಅಥವಾ ಇಂಥ ಇತರ ಅಂಕಿ ಅಂಶಗಳನ್ನು ತಾರೀಖು ಪಟ್ಟಿ ವರ್ಷಕ್ಕೆ (ಜನವರಿಯಿಂದ ಡಿಸೆಂಬರ್ ವರೆಗೆ) ಅಥವಾ ಹಣಕಾಸಿನ ವರ್ಷ ಅಂದರೆ ಏಪ್ರಿಲ್‍ನಿಂದ ಮಾರ್ಚ್‍ವರೆಗೆ ಕೊಟ್ಟಿರಬಹುದು. ಬೇಸಾಯದ ಅಂಕಿ ಅಂಶಗಳಿಗೂ ವ್ಯಾಪಾರದ ಅಂಕಿಗಳಿಗೂ ಹೋಲಿಸುವಲ್ಲಿ ಈ ವ್ಯತ್ಯಾಸವನ್ನು ತಪ್ಪದೆ ಗಮನದಲ್ಲಿ ಇಡಬೇಕು. ಪಟವಾರಿ ಮತ್ತು ಚೌಕಿದಾರರಿಂದ ವರದಿಯಾದ ಅಂಕಿ ಸಂಖ್ಯೆಗಳ ಆಧಾರದ ಮೇಲೆ ವಿವಿಧ ಬೆಳೆಗಳ ಎಕರೆ ಪ್ರಕಾರದ ಮುನ್ಸೂಚನೆಯನ್ನು ಕಾಲಕಾಲಕ್ಕೆ ಹೊರಡಿಸುವರು. ಈ ಅಂಕಿಗಳನ್ನು ವಾಣಿಜ್ಯ ವರ್ತಮಾನ ಮತ್ತು ಅಂಕಿ ಅಂಶಗಳ ಖಾತೆಯವರು ಪ್ರಕಟಿಸುವ ನಿಯತಕಾಲಿಕವಾದ ಬೆಳೆಗಳ ಮುನ್ನಂದಾಜುಗಳು ಮತ್ತು ಭಾರತದ ವಾಣಿಜ್ಯ ಪತ್ರಿಕೆಗಳಲ್ಲಿ ಪ್ರಕಟಿಸುವರು. ಅಕ್ಕಿಯ ಎಕರೆ ಲೆಕ್ಕ ಮುನ್ನಂದಾಜನ್ನು ತಿಳಿಸಲು ಇರುವ ದಿನಾಂಕಗಳು ಮೂರು - ಅಕ್ಟೋಬರ್ 20, ಡೆಸೆಂಬರ್ 20, ಫೆಬ್ರವರಿ 20, ಈ ಅಂಕಿಗಳನ್ನು ಭಾರತದಲ್ಲಿ ಪ್ರಧಾನ ಬೆಳೆಗಳ ಉತ್ಪತ್ತಿ ಮತ್ತು ವಿಸ್ತೀರ್ಣಗಳ ಅಂದಾಜುಗಳು ಎಂಬುದರಲ್ಲಿ ತರುವಾಯ ಪ್ರಕಟಿಸುವರು. ಹತ್ತಿಯ ಬಗ್ಗೆ ವಿಸ್ತಿರ್ಣದ ನಾಲ್ಕು ಮುನ್ನಂದಾಜುಗಳಿವೆ. ಮೊದಲನೆಯ ಮುನ್ಸೂಚನೆ ಆಗಸ್ಟ್‍ನಲ್ಲಿ, ಎರಡನೆಯದು ಅಕ್ಟೋಬರಿನಲ್ಲಿ, ಮೂರನೆಯದು ಡಿಸೆಂಬರ್‍ನಲ್ಲಿ ಮತ್ತು ಕೊನೆಯದು ಫೆಬ್ರುವರಿಯಲ್ಲಿ. ಅಂತಿಮ ಅಥವಾ ತನಿಖೆ ಮಾಡಿದ ಲೆಕ್ಕಗಳು ಮೇ ತಿಂಗಳಲ್ಲಿ ದೊರೆಯುವುವು. 
		1927-28 ವರ್ಷಕ್ಕೆ ಮುನ್ನಂದಾಜಿನ ಅಂಕಿಗಳು (ದಶಲಕ್ಷ ಎಕರೆಗಳಲ್ಲಿ) :
ಮೊದಲನೆಯ	ಎರಡನೆಯ	ಮೂರನೆಯ	ನಾಲ್ಕನೆಯ	ಸಂಶೋಧಿಸಿದ ಲೆಕ್ಕ
	ಅಂದಾಜು	ಅಂದಾಜು	ಅಂದಾಜು	ಅಂದಾಜು

	15.2		20.6		23.2		23.3		24.7

ಇವುಗಳ ಪೈಕಿ 15.2 ಅಂಕಿ ಬಹಳ ಕಡಿಮೆಯಾದ ಅಂದಾಜಾಗಿದೆ. ಆದರೆ ಇದು ಆಗಸ್ಟ್‍ನಲ್ಲಿ ಮುನ್ಸೂಚನೆಯ ದಿನದವರೆಗಿನ ಬಿತ್ತನೆಯಾದ ಎಕರೆ ಲೆಕ್ಕದ ವರದಿ ಅಥವಾ ಅಂದಾಜಲ್ಲದೆ ಭವಿಷ್ಯಕ್ಕೆ ಅನ್ವಯಿಸುವ ಅಂದಾಜಲ್ಲ ಎಂಬುದನ್ನು ಗಮನಿಸಬೇಕು. ಮೊದಲನೆಯ ಮುನ್ನಂದಾಜಿನ ಉದ್ದೇಶ ಬಿತ್ತನೆಯಾದ ವಿಸ್ತೀರ್ಣ ಮತ್ತು ಬೀಜದ ಮೊಳಕೆ ಬಂದಿರುವ ಭೂಮಿಯನ್ನು ಕುರಿತು ಆದಷ್ಟು ಬೇಗ ತಿಳಿವಳಿಕೆಯನ್ನು ಕೊಡುವುದೇ ಆಗಿದೆ. ಎರಡು ತಿಂಗಳ ಅನಂತರ ಹೊರಬೀಳುವ ಎರಡನೆಯ ಮುನ್ಸೂಚನೆ ತಡವಾದ ಬಿತ್ತನೆಯ ಪ್ರದೇಶವನ್ನು ಒಳಗೊಂಡಿದೆ ಮತ್ತು ಬೆಳೆಯ ಸ್ಥಿತಿಯನ್ನು ಕುರಿತ ವಿಷಯದೊಂದಿಗೆ ಪೈರಿನ ಪ್ರಾಯಶಃ ಗುಣಗಳನ್ನು ಸೂಚಿಸುತ್ತದೆ.

	ವಿಸ್ತೀರ್ಣದ ಅಂಕಿ ಅಂಶಗಳನ್ನು ಸಂಗ್ರಹಿಸುವ ಕ್ರಮ : ವಿಸ್ತೀರ್ಣದ ಅಂಕಿ ಅಂಶಗಳನ್ನು ಹಳ್ಳಿಯ ದ್ರವ್ಯ ಅಧಿಕಾರಿಗಳು ನೇರವಾದ ಎಣಿಕೆಯಿಂದ ಸಂಗ್ರಹಿಸುತ್ತಾರೆ. ಹೊಲಹೊಲಕ್ಕೆ ಹೋಗಿ ಬೆಳೆಗಳ ಪರಿಶೀಲನೆಯ ಆಧಾರದ ಮೇಲೆ ಸಾಗುವಳಿಯ ಕಾಲದಲ್ಲಿ ವಿವಿಧ ಬೆಳೆಗಳ ಎಕರೆ ಲೆಕ್ಕದ ಅಂಕಿ ಅಂಶಗಳನ್ನು ಹಳ್ಳಿಯ ಅಧಿಕಾರಿ ಸಂಗ್ರಹಿಸಿ ಬರೆಯುತ್ತಾನೆ. ಭೂಕಂದಾಯಕ್ಕಾಗಿ ಪೈಮಾಯಿಷಿ ಮಾಡಲಾದ ಹಳ್ಳಿಗಳ ವಿಷಯದಲ್ಲಿ ಹೊಲಗದ್ದೆಗಳಿಗೆ ಸರ್ವೆ ಪೈಮಾಯಿಷಿ ಸಂಖ್ಯೆಯನ್ನು ಕೊಡಲಾಗಿರುವುದು ಮತ್ತು ಪ್ರತಿಯೊಂದು ಬೆಳೆಗೆ ಒಳಗಾದ ವಿಸ್ತೀರ್ಣವನ್ನು ತಿಳಿಯಲು ಹೆಚ್ಚು ಕಷ್ಟವಾಗುವುದಿಲ್ಲ. ಆದರೆ ಖಾಯಂ ಗುತ್ತಾ ಪ್ರದೇಶಗಳಲ್ಲಿ ಪೈಮಾಯಿಷಿ ಮತ್ತು ಸರ್ವೆ ಸಂಖ್ಯೆ ಇಲ್ಲದಿರುವುದರಿಂದ ವಿವಿಧ ಹೊಲಗದ್ದೆಗಳ ವಿಸ್ತೀರ್ಣಗಳು ತಿಳಿದಿರುವುದಿಲ್ಲ. ಹಳ್ಳಿಗಳಲ್ಲಿ ವಿವಿಧ ಬೆಳೆಗಳಿಗೆ ಬಿತ್ತಿದ ಜಮೀನಿನ ವಿಸ್ತೀರ್ಣವನ್ನು ಅಂದಾಜು ಮಾಡಲು ದ್ರವ್ಯ ಅಧಿಕಾರಿಗಳು ಯಾರೂ ಇರುವುದಿಲ್ಲ. ಈ ಪ್ರದೇಶಗಳಲ್ಲಿ ಚೌಕಿದಾರ ಅಥವಾ ಪೊಲೀಸ್ ಪೇದೆ ಅಷ್ಟೇನೂ ನಂಬಲರ್ಹವಲ್ಲದ ಅಂದಾಜುಗಳನ್ನು ಒದಗಿಸುತ್ತಾನೆ. ಪಟವಾರಿ ಮತ್ತು ಚೌಕಿದಾರರಿಂದ ಒದಗಿಸಲಾದ ಅಂಕಿ ಅಂಶಗಳನ್ನು ತಹಸೀಲು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಪರಿಶೋಧಿಸಲಾಗುತ್ತದೆ ಮತ್ತು ಪುನರ್ವಿಮರ್ಶಿಸಿ ಕ್ರೋಡೀಕರಿಸಿದ ಅಂದಾಜುಗಳನ್ನು ರಾಜ್ಯಸರ್ಕಾರಕ್ಕೆ ಕಳುಹಿಸಲಾಗುವುದು. ಅಲ್ಲಿ ಈ ವಿವರಗಳ ಮೇಲೆ ಅಂತಿಮ ಅಂದಾಜನ್ನು ಮಾಡುತ್ತಾರೆ. ಕೆಲವು ರಾಜ್ಯಗಳಲ್ಲಿ ಬೇಸಾಯದ ನಿರ್ದೇಶಕರಿಗೆ ಈ ಕೆಲಸವನ್ನುವಹಿಸಲಾಗಿದೆ. ಇತರ ರಾಜ್ಯಗಳಲ್ಲಿ ದ್ರವ್ಯ ಅಧಿಕಾರಿಗಳಿಗೆ ಈ ಕೆಲಸವನ್ನು ಒಪ್ಪಿಸಲಾಗುತ್ತದೆ.

	ಎಕರೆವಾರು ಅಂಕಿ ಅಂಶಗಳ ನ್ಯೂನತೆಗಳು : ರೈತವಾರಿ ಪ್ರದೇಶಗಳಲ್ಲಿ ಬಿತ್ತನೆಯ ಪ್ರದೇಶ, ಬೀಳುಬಿಟ್ಟ ಪ್ರದೇಶ, ಪ್ರತಿಯೊಂದು ಬೆಳೆಗೂ ಬಿತ್ತನೆಯಾದ ಪ್ರದೇಶಗಳನ್ನು ಕುರಿತು ಸಂಪೂರ್ಣ ಮಾಹಿತಿಯನ್ನು ಪಟವಾರಿ ಒದಗಿಸುವನು. ಅವನ ಅಧಿಕಾರಕ್ಕೆ ಒಳಪಟ್ಟ ಪ್ರದೇಶಗಳಲ್ಲಿ ಅವನು ಹೊಲ ಹೊಲಕ್ಕೂ ಹೋಗಿ ಪರಿಶೀಲಿಸಿ ಎಣಿಕೆ ಆಧಾರದ ಮೇಲೆ ಲೆಕ್ಕಾಚಾರಗಳನ್ನು ಒದಗಿಸುವನೆಂದು ನಿರೀಕ್ಷಿಸಲಾಗಿದೆ. ಆದರೆ ಅವನು ಎಲ್ಲ ಹೊಲಗದ್ದೆಗಳಿಗೂ ಭೇಟಿ ಕೊಡುವುದೇ ಇಲ್ಲ. ಅವಶ್ಯಕವಾದ ವಿಷಯಗಳನ್ನು ಭೂಮಾಲೀಕರ ಅಥವಾ ನೆರೆಕರೆಯವರಿಂದ ಪಡೆಯುವನು. ಹತ್ತಿ, ಸೆಣಬು ಮತ್ತು ಇತರ ನಗದು ಬೆಳೆಗಳ ವಾಣಿಜ್ಯ ಅಂಕಿಅಂಶಗಳ ವಿವರಗಳನ್ನು ಹೋಲಿಸುವುದರಿಂದ ಹಳ್ಳಿಯ ಶ್ಯಾನುಭೋಗರಿಂದ ಒದಗಿಸಲಾದ ಅಂಕಿಗಳಲ್ಲಿ ನಿಶ್ಚಯವಾದ ಕೆಳಗಣ ಅಭಿನತಿ (ಡೌರ್ನ್‍ವರ್ಡ್ ಬಯಸ್) ಇದೆ ಎಂದು ಕಂಡು ಬರುತ್ತದೆ. ಮತ್ತೊಂದು ಗಮನಾರ್ಹವಾದ ನ್ಯೂನತೆ ಮಿಶ್ರ ಬೆಳೆಗಳ ಪ್ರದೇಶವನ್ನು ಕುರಿತು ವರದಿಯೊಪ್ಪಿಸುವುದರಲ್ಲಿದೆ. ಸಕಾಲದಲ್ಲಿ ಮಳೆ ಬೀಳದಿದ್ದರೆ ಒಂದು ವಿಧದ ವಿಮೆಯಂತಿರಲಿ ಎಂದು ಭಾರತದಲ್ಲೆಲ್ಲ ಸಾಮಾನ್ಯವಾಗಿ ಮಿಶ್ರಬೆಳೆಯನ್ನು ಬೆಳೆಸುವರು. ಕೆಲವು ರಾಜ್ಯಗಳಲ್ಲಿ ಗೋಧಿ ಮತ್ತು ಬಾರ್ಲಿ ಮುಂತಾದ ಮಿಶ್ರ ಬೆಳೆಯ ಒಟ್ಟು ಪ್ರದೇಶವನ್ನು ಒಟ್ಟು ಜಿಲ್ಲೆಗೆ ಪಡೆಯುತ್ತಾರೆ; ಮತ್ತು ರಾಜ್ಯಾಧಿಕಾರಿಯಿಂದ ನಮೂದಿಸಲಾದ ನಿಶ್ಚಿತ ಪ್ರಮಾಣಗಳಲ್ಲಿ ಈ ಪ್ರದೇಶವನ್ನು ಆಯಾ ಬೆಳೆಗಳಿಗೆ ಹಂಚುವರು. ಈ ಪ್ರಮಾಣಗಳು ಕೇವಲ ಪ್ರಧಾನ ಬೆಳೆಗಳ ಮಿಶ್ರಗಳಿಗೆ ಮಾತ್ರ ನಿಶ್ಚಿತವಾಗಿದೆ. ಇತರ ಸಣ್ಣ ಬೆಳೆಗಳ ಮಿಶ್ರಗಳ ಬಗ್ಗೆ ಇಡೀ ಪ್ರದೇಶವನ್ನು ಹಿರಿಯ ಬೆಳೆಯ ಕೆಳಗೆ ಎಣಿಕೆ ಮಾಡುವರು. ಮತ್ತೆ ಕೆಲವು ರಾಜ್ಯಗಳಲ್ಲಿ ಪಟವಾರಿ ಕಣ್ಣಂದಾಜಿನಿಂದಲೆ ಎರಡು ಮಿಶ್ರಬೆಳೆಗಳಲ್ಲಿ ಪ್ರತಿಯೊಂದರ ವಿಸ್ತೀರ್ಣವನ್ನೂ ಲೆಕ್ಕ ಹಾಕುವನು. ಉದಾಹರಣೆಗೆ ಗೋಧಿ ಮತ್ತು ಎಣ್ಣೆಬೀಜಗಳನ್ನು ಒಂದು ಹೊಲದಲ್ಲಿ ಒಟ್ಟಾಗಿ ಬೆಳೆಸಿದರೆ ಗೋಧಿ ಬೆಳೆದ ಭಾಗದ ಮತ್ತು ಎಣ್ಣೆ ಬೀಜಗಳನ್ನು ಬೆಳೆದ ಭಾಗದ ವಿಸ್ತೀರ್ಣವನ್ನು ಬೇರೆಬೇರೆಯಾಗಿ ಅಂದಾಜುಮಾಡಬೇಕೆಂಬ ನಿಯಮವಿದೆ. ಉದಾಹರಣೆಗೆ ಗೋಧಿಯ ಎರಡು ಸಾಲುಗಳನ್ನೂ ಎಣ್ಣೆಬೀಜದ ಒಂದು ಸಾಲನ್ನೂ ಪರ್ಯಾಯವಾಗಿ ಬೆಳೆಸಿದರೆ ಒಟ್ಟು ಪ್ರದೇಶವನ್ನು 2:1 ನಿಷ್ಟತ್ತಿಯಲ್ಲಿ ಪಾಲುಮಾಡಬೇಕು. ಆದರೆ ಆ ಎರಡು ಬೆಳೆಗಳನ್ನು ಸಾಲುಗಟ್ಟಿ ಹಾಕದೆ ಎರಚಿ ಬಿತ್ತನೆ ಮಾಡಿದ್ದರೆ ಈ ಕ್ರಮವನ್ನು ಪ್ರಯುಕ್ತಿಸಲು ಸಾಧ್ಯವಿಲ್ಲ. ಆಗ ಪಟವಾರಿಗಳ ಅಂದಾಜುಗಳು ಕೇವಲ ಊಹೆಗಳಾಗಿ ಉಳಿಯುವುವು. ಹಾಗಲ್ಲದೆ ಆ ಎರಡು ಬೆಳೆಗಳನ್ನು ಒಂದೇ ಹೊಲದ ಬೇರೆ ಬೇರೆ ಭಾಗಗಳಲ್ಲಿ ಅಳೆದು ಪ್ರಮಾಣಗಳನ್ನು ಗೊತ್ತುಮಾಡಬಹುದು. ಸಾಮಾನ್ಯವಾಗಿ ಶ್ಯಾನುಭೋಗರು ಯಾವ ಅಳತೆಯನ್ನೂ ಮಾಡದೆ ಕಣ್ಣಂದಾಜಿನ ಬೆಲೆಗಳನ್ನೇ ಕೊಡುವರು. ಇಷ್ಟೆಲ್ಲ ನ್ಯೂನತೆಗಳು ಮತ್ತು ಕುಂದುಕೊರತೆಗಳಿದ್ದರೂ ಭಾರತದ ಸಾಗುವಳಿ ಪ್ರದೇಶದ ವಿಸ್ತೀರ್ಣದ ಅಂಕಿಗಳೂ ಅಮೆರಿಕ ಮತ್ತು ಹಲವು ಇತರ ದೇಶಗಳಿಂದ ಹೆಚ್ಚು ನಿಖರವಾಗಿವೆ. ಅಮೆರಿಕದಲ್ಲಿ 80,000 ಬೆಳೆಯ ಸ್ವತಂತ್ರ ವರದಿಗಾರರು ತಮ್ಮ ತಮ್ಮ ಸ್ಥಳದ ವಿವಿಧ ಬೆಳೆಗೆ ಬಿತ್ತನೆಯಾದ ಜಮೀನಿನ ವಿಸ್ತೀರ್ಣದ ಅಂಕಿಗಳನ್ನು ಒದಗಿಸುವರು. ಈ ಅಂಕಿಗಳನ್ನು ಭಾರತದಲ್ಲಿರುವಂತೆ ಸಂಪೂರ್ಣ ಲೆಕ್ಕಾಚಾರದಿಂದಲ್ಲದೆ ವ್ಯಕ್ತಿಗತ ಅಂದಾಜುಗಳಿಂದ ಪಡೆದಿರುವರು. ಆದ್ದರಿಂದ ತಪ್ಪುಗಳಿರುವುದು ಸಹಜ.
	
ಬೇರೆ ಬೇರೆ ಬೆಳೆಗಳಿಗೆ ಒಳಪಟ್ಟ ಪ್ರದೇಶಗಳ ಅಂದಾಜುಗಳಲ್ಲಿ ಇನ್ನೂ ಕೆಲವು ನ್ಯೂನತೆಗಳಿವೆ. ಉದಾಹರಣೆಗೆ ಕೃಷಿ ಮಾಡಿದ ಹೊಲಗದ್ದೆಗಳ ನಡುವೆ ಇರುವ ಬೇಸಾಯ ಮಾಡದ ತುಂಡು ಭೂಮಿಗಳ ವಿಸ್ತೀರ್ಣದ ಅಂದಾಜಿನ ಕ್ರಮದಲ್ಲಿ ಸಮಾನತೆ ಇರುವುದಿಲ್ಲ. ಇದೇ ಸಮಾನತೆಯ ನ್ಯೂನತೆ ಬದುಗಳ ಮತ್ತು ದಂಡೆಗಳ ವಿಸ್ತೀರ್ಣದ ಅಂದಾಜಿನಲ್ಲಿಯೂ ಇರುವುದು. ಈ ಎಲ್ಲ ಸಂದರ್ಭಗಳಲ್ಲಿಯೂ ಕೈಕೊಳ್ಳಬಹುದಾದ ಸಾಮಾನ್ಯ ನಿಯಮವನ್ನು ಗೊತ್ತುಪಡಿಸುವುದು ಒಳ್ಳೆಯದು. ಉದಾಹರಣೆಗೆ ಶಾಶ್ವತವಾದ ದಂಡೆಗಳು ಅಂದರೆ ಬೇರೆ ಬೇರೆ ಆರಂಭಗಾರರಿಗೆ ಸೇರಿದ ಹೊಲ ಗದ್ದೆಗಳ ಮೇರೆಗಳುದ್ದಕ್ಕೂ ಇರುವ ದಂಡೆಗಳನ್ನು ಬಿಟ್ಟುಬಿಡತಕ್ಕದ್ದು ಮತ್ತು ಪ್ರತ್ಯೇಕವಾಗಿ ಪಟ್ಟಾ ಅಥವಾ ಖಾತೆಯಲ್ಲಿ ತೋರಿಸತಕ್ಕದ್ದು. ಹಾಗೂ ಹಂಗಾಮಿ ದಂಡೆಗಳನ್ನು (ಅಂದರೆ ಒಬ್ಬ ಬೇಸಾಯಗಾರನಿಗೇ ಸೇರಿದ ಸರ್ವೆ ಸಂಖ್ಯೆಯಲ್ಲಿನ ಹೊಲಗದ್ದೆಗಳನ್ನು ಸಣ್ಣ ಸಣ್ಣ ಭಾಗಗಳಾಗಿ ವಿಭಾಗಿಸುವ ದಂಡೆಗಳನ್ನು) ಆಯಾ ಬೆಲೆಗಳ ವಿಸ್ತೀರ್ಣಗಳಲ್ಲಿ ಸೇರಿಸತಕ್ಕದ್ದು ಎಂದು ನಮೂದಿಸಬಹುದು.

	ಶಿಷ್ಟಪ್ರಸಾಮಾನ್ಯ ಉತ್ಪತ್ತಿ (ಸ್ಟ್ಯಾಂಡರ್ಡ್ ನಾರ್ಮಲ್ ಯೀಲ್ಡ್) : ನಿರ್ದಿಷ್ಟ ಸ್ಥಳದಲ್ಲಿ ಯಾವುದಾದರೂ ಬೆಳೆಯ ಸಾಧಾರಣ ಉತ್ಪತ್ತಿ ಆ ಪದವೇ ಸೂಚಿಸುವಂತೆ ಪ್ರಸಾಮಾನ್ಯ ವರ್ಷದಲ್ಲಿ ಸರಾಸರಿ ಫಲವತ್ತಾದ ಪ್ರದೇಶಗಳ ಎಕರೆಯ ಉತ್ಪತ್ತಿಯಾಗಿದೆ. ಸರಾಸರಿ ಫಲವಂತಿಕೆ (ಎವರೇಜ್ ಫರ್ಟಿಲಿಟಿ) ಮತ್ತು ಪ್ರಸಾಮಾನ್ಯ ವರ್ಷ (ನಾರ್ಮಲ್ ಇಯರ್) ಎಂಬ ಪದಗಳನ್ನು ಸ್ಪಷ್ಟವಾಗಿ ವ್ಯಾಖ್ಯಿಸಿಲ್ಲವಾದ್ದರಿಂದ ಪ್ರಸಾಮಾನ್ಯ ಎಂಬುದೇ ಒಂದು ಅಸ್ಪಷ್ಟ ಭಾವನೆಯಾಗುವುದು. ಮುಂದೆ ಕೊಟ್ಟಿರುವುದು ಪ್ರಸಾಮಾನ್ಯ ಉತ್ಪತ್ತಿಯ ಅಧಿಕೃತ ವ್ಯಾಖ್ಯೆಗಳು : ಹಲವು ವರ್ಷಗಳ ಅವಧಿಯಲ್ಲಿ ಅತ್ಯಂತ ಸಾಮಾನ್ಯವಾಗಿ ಆವರ್ತಿಸುವ ಬೆಳೆ ಎಂದು ಹಿಂದಿನ ಅನುಭವದಿಂದ ಕಂಡುಬಂದಿರುವ ಬೆಳೆ ; ಆ ಪ್ರದೇಶದ ಪ್ರರೂಪದ (ಟಿಪಿಕಲ್) ಅಥವಾ ಲಾಕ್ಷಣಿಕ ಬೆಳೆ ; ಯಾವ ಬೆಳೆಯನ್ನು ನಿರೀಕ್ಷಿಸಲು ಬೇಸಾಯಗಾರರಿಗೆ ಅಧಿಕಾರವಿದೆಯೋ ಮತ್ತು ಅದರಿಂದ ತೃಪ್ತನಾಗುವನೋ ಆ ಬೆಳೆ ; ಹೆಚ್ಚು ಪಡೆದರೆ ಸಂತೋಷಪಡಲು ಕಾರಣವಿರುವ ಕಡಿಮೆ ಪಡೆದರೆ ಕೊರಗಲು ಕಾರಣವಿರುವ ಬೆಳೆ. ಇಂಥ ಬೆಳೆಯ ಪ್ರತಿ ಎಕರೆ ಉತ್ಪತ್ತಿಯೇ ಎಕರೆಯ ಶಿಷ್ಟಪ್ರಸಾಮಾನ್ಯ ಉತ್ಪತ್ತಿ. ಮೇಲಿನ ವ್ಯಾಖ್ಯೆಯನ್ನು ಸ್ಪಷ್ಟಪಡಿಸಲು ಭಾರತದಲ್ಲಿ ಬೆಳೆಗಳ ಮುನ್ನಂದಾಜಿನ ತಯಾರಿಕೆ ಹೆಚ್ಚಿನ ವಿವರಣೆಗಳನ್ನು ಹೀಗೆ ವಿವರಿಸಿದೆ : ಸಾಮಾನ್ಯ ಉತ್ಪತ್ತಿ ಎಂದರೆ ಸಾಮಾನ್ಯ ಗುಣವಿರುವ ಒಂದು ವರ್ಷದಲ್ಲಿ ಸಾಮಾನ್ಯ ಭೂಮಿಯ ಸರಾಸರಿ ಉತ್ಪತ್ತಿ ; ಈ ಸಾಮಾನ್ಯ ಉತ್ಪತ್ತಿ ಅಂಕಗಣಿತದ ಕಲ್ಪನೆಯಾದ ಬಹುವರ್ಷಗಳ ಸರಾಸರಿ ಬೆಳೆಯೊಡನೆ ತಾಳೆ ಬೀಳಬೇಕಾದ ಅವಶ್ಯಕತೆಯೇನೂ ಇಲ್ಲ.

	ಈ ವಿವರಣೆಗಳು ವ್ಯಾಖ್ಯೆಯನ್ನು ಇನ್ನೂ ಹೆಚ್ಚು ಅಸ್ಪಷ್ಟಪಡಿಸುತ್ತವೆ. ವರ್ಷ ಪರಂಪರೆಯ ಬೆಳೆಗಳ ಸರಾಸರಿಯನ್ನು ಬಿಟ್ಟು ಬಹುಳಕವನ್ನು (ಮೋಡ್) ಪ್ರಸಾಮಾನ್ಯ ಬೆಳೆಯಾಗಿ ತೆಗೆದುಕೊಳ್ಳಬೇಕೆಂದು ಹೇಳುವಂತಿದೆ ಈ ವ್ಯಾಖ್ಯೆ. ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲೂ ಪ್ರಸಾಮಾನ್ಯ ಉತ್ಪತ್ತಿ ಎಂಬ ಪದದ ವ್ಯಾಖ್ಯೆಯಲ್ಲಿ ಹೆಚ್ಚು ನಿಖರತೆಯನ್ನು ಸಾಧಿಸಿಲ್ಲ. ಬರಗಾಲ, ಆಲಿಕಲ್ಲು ಅಥವಾ ಅನಾಹುತಗಳು ಇಲ್ಲದೇ ಉತ್ತಮವಾದ ಸ್ಥಿತಿಯಲ್ಲಿ ಮೊಳೆತು ಬೆಳೆದ ಬೆಳೆ ಊಹೆಯ ಉತ್ಪತ್ತಿ ಎಂದು ಪ್ರಸಾಮಾನ್ಯ ಉತ್ಪತ್ತಿಯನ್ನು ಅಲ್ಲಿ ವ್ಯಾಖ್ಯಿಸಲಾಗಿದೆ. ಶಿಷ್ಟಪ್ರಸಾಮಾನ್ಯ ಉತ್ಪತ್ತಿಯನ್ನು ಅನೇಕ ವರ್ಷಗಳ ಸರಾಸರಿಯಾಗಿ ತೆಗೆದು ಕೊಳ್ಳುವುದು ಸೂಕ್ತವೆಂದು ಕಂಡುಬರುವುದು. ಅನೇಕ ವರ್ಷಗಳ ಬೆಳೆಗಳ ಉತ್ಪತ್ತಿಯ ಅಂಕಿ ಅಂಶಗಳ ಖಾತರಿ ವಿವರಗಳು ದೊರೆಯುವುದಾದರೆ ನಾವು ಸುಲಭವಾಗಿ ಸರಾಸರಿಯನ್ನು ಕಂಡುಹಿಡಿದು ಅದನ್ನು ಪ್ರಸಾಮಾನ್ಯ ಉತ್ಪತ್ತಿಯಾಗಿ ತೆಗೆದುಕೊಳ್ಳಬಹುದು. ಆದರೆ ಅಂಥ ಅಂಕಿ ಅಂಶಗಳ ವಿವರಗಳು ದೊರೆಯುವುದಿಲ್ಲ. ಆದ್ದರಿಂದ ಸಾಧಾರಣವಾಗಿ ಪ್ರಸಾಮಾನ್ಯ ಉತ್ಪತ್ತಿಯನ್ನು ಕಟಾವಿನ ಪ್ರಯೋಗಗಳಿಂದ ನಿರ್ಧರಿಸುವರು.
	
ಬೆಳೆಯ ಕಟಾವಿನ ಪ್ರಯೋಗಗಳು : ರಾಜ್ಯಗಳಲ್ಲಿರುವ ಕೃಷಿ ಖಾತೆಗಳು, ಪ್ರತಿಯೊಂದು ಜಿಲ್ಲೆಯ ಹಲವಾರು ಬೆಳೆಗಳಿಗೆ ಸಾಧಾರಣ ಗುಣವುಳ್ಳ ತರಿ ಮತ್ತು ಖುಷ್ಕಿ ಜಮೀನಿನ ಪ್ರತಿ ಎಕರೆಯ ಪ್ರಸಾಮಾನ್ಯ ಅಥವಾ ಸರಾಸರಿ ಉತ್ಪತ್ತಿಯ ಪಟ್ಟಿಯನ್ನು ಬರೆದಿಟ್ಟಿರುವರು. ಪ್ರಸಾಮಾನ್ಯ ಉತ್ಪತ್ತಿಯ ಈ ಶಿಷ್ಟ ದರದ ನಿಷ್ಕøಷ್ಟತೆಯನ್ನು ಪರೀಕ್ಷಿಸಲು ಮತ್ತು ಅವಶ್ಯಬಿದ್ದಾಗ ಪುನರ್ವಿಮರ್ಶಿಸಲು ಬೆಳೆಯ ಕಟಾವಿನ ಪ್ರಯೋಗಗಳನ್ನು ಕೈಗೊಳ್ಳಲಾಗುವುದು. 1/3 ರಿಂದ 1/5 ಎಕರೆಯ ವಿಸ್ತಿರ್ಣದ ಸಾಧಾರಣ ಗುಣವುಳ್ಳ ಭೂಮಿಯ ತುಂಡು ನೆಲಗಳನ್ನು ಆರಿಸುವರು. ಪ್ರತಿಯೊಂದು ತುಂಡಿನಲ್ಲೂ ಬೆಳೆದ ಬೆಳೆಯನ್ನು ಕಟಾವು ಮಾಡಿ, ತೂಕಮಾಡಿ ಮತ್ತು ಅದನ್ನೇ ಎರಡು ವಾರಗಳ ಅನಂತರ ಪುನಃ ತೂಕ ಮಡುವುದರಿಂದ ಆರುವಾಸಿಯ ಪ್ರಮಾಣವನ್ನು ಕಂಡುಹಿಡಿಯುವರು. ಪ್ರಯೋಗದ ಪಾತಿಯ ಉತ್ಪತ್ತಿಯನ್ನೂ ಅದರಿಂದ ಪ್ರತಿ ಎಕರೆಯ ಉತ್ಪತ್ತಿಯನ್ನೂ ಲೆಕ್ಕಹಾಕುವರು. ಈ ಪ್ರಯೋಗಗಳನ್ನು ಎಲ್ಲ ಪ್ರಧಾನ ಬೆಳೆಗಳಿಗೂ ಪ್ರತಿವರ್ಷದಲ್ಲೂ ನಡೆಸುವರು. ಪಡೆದ ಉತ್ಪತ್ತಿಗಳ ಸರಾಸರಿಯನ್ನು ಪ್ರಸಾಮಾನ್ಯ ಉತ್ಪತ್ತಿಯಾಗಿ ತೆಗೆದುಕೊಳ್ಳಬಹುದು. ಆದರೆ ನಿಜವಾಗಿ ಮಾಡುವುದೇನೆಂದರೆ ಕೃಷಿಯ ರಾಜ್ಯ ನಿರ್ದೇಶಕ ಬೆಳೆಯ ಕಟಾವಿನ ಪ್ರಯೋಗಗಳ ಎಲ್ಲ ವರದಿಗಳನ್ನು ಎಚ್ಚರಿಕೆಯಿಂದ ಪರಿಶೋಧಿಸಿ ಮತ್ತು ತನಗೆ ಅವಶ್ಯಕವೆಂದು ಕಂಡುಬರುವ ತನಿಖೆಗಳ ಅನಂತರ ಪ್ರತಿಯೊಂದು ಜಿಲ್ಲೆಯ ಪ್ರತಿಯೊಂದು ಬೆಳೆಯ ಶಿಷ್ಟ ಉತ್ಪತ್ತಿಯನ್ನು ಪುರ್ನವಿಮರ್ಶಿಸಿ ನಿಶ್ಚಯಗೊಳಿಸುವನು. ಸಾಮಾನ್ಯವಾಗಿ 5 ವರ್ಷಗಳಿಗೊಮ್ಮೆ ಪುರ್ನವಿಮರ್ಶೆಯನ್ನು ಮಾಡಲಾಗುವುದು.

	ಪ್ರಸಾಮಾನ್ಯ ಉತ್ಪತ್ತಿಯನ್ನು ಪಡೆಯಲು ಅನುಸರಿಸುವ ಪ್ರಚಲಿತ ಪದ್ಧತಿಯ ನ್ಯೂನತೆಗಳು ಇವು : 1. ಕೆಲವು ರಾಜ್ಯಗಳಲ್ಲಿ, ಉದಾಹರಣೆಗೆ, ದೆಹಲಿಯಲ್ಲಿ ಬೆಳೆಯ ಕಟಾವಿನ ಪ್ರಯೋಗಗಳನ್ನು ನಡೆಸುವುದಿಲ್ಲ. ಆದರೆ ದ್ರವ್ಯ ಅಧಿಕಾರಿ ತನ್ನ ಸ್ವಂತ ವಿಚಾರಣೆಗಳ ಆಧಾರದ ಮೇಲೆ ಅಂದಾಜನ್ನು ತಯಾರಿಸುವನು. ಎಲ್ಲ ರಾಜ್ಯಗಳೂ ಏಕರೀತಿಯಲ್ಲಿ ಬೆಳೆಯ ಕಟಾವಿನ ಆಧಾರದ ಮೇಲೆ ಅಂದಾಜನ್ನು ತಯಾರಿಸುವುದು ಒಳ್ಳೆಯದು. 2. ಹಲವಾರು ಸಂದರ್ಭಗಳಲ್ಲಿ ಬೆಳೆಯ ಕಟಾವಿನ ಪ್ರಯೋಗಗಳ ಸಂಖ್ಯೆ ಬಹಳ ಕಡಿಮೆಯಾಗಿರುವುದರಿಂದ ಖಾತರಿಯಾದ ಫಲಿತಾಂಶವನ್ನು ಪಡೆಯಲಾಗುವುದಿಲ್ಲ. ಆದ್ದರಿಂದ ಪ್ರಯೋಗಗಳ ಸಂಖ್ಯೆಯನ್ನು ಹೆಚ್ಚಿಸುವುದು ಅಗತ್ಯ. 3. ಬೆಳೆಯ ಕಟಾವಿನ ಪ್ರಯೋಗಗಳನ್ನು ನಡೆಸಲು ಅವಶ್ಯಕವಾದ ಸಾಧಾರಣ ಫಲವತ್ತಾದ ಭೂಮಿಯ ಸರಾಸರಿ ಬೆಳೆಯನ್ನು ಆರಿಸುವುದು ನಿಜವಾಗಿಯೂ ಕಷ್ಟಸಾಧ್ಯ. ಸುಲಭವಾಗಿ ನಿಷ್ಕರ್ಷಿಸಬಹುದಾದ ಮತ್ತು ಸಮೀಪದಲ್ಲಿರುವ ಅನುಕೂಲವಾದ ಹೊಲವನ್ನು ಯಾವಾಗಲೂ ವಿಧಿ ವಿಹಿತವಾದ ನಿವೇಶನದ ಅಳತೆಗಿಂತ ಸಣ್ಣದಾಗಿರುವುದನ್ನು ಆರಿಸುವರು. ನಿವೇಶನಗಳನ್ನು ಅಳತೆಪಟ್ಟಿಯಿಂದ ಸರಿಯಾಗಿ ಅಳತೆಮಾಡದೆ ಹೆಜ್ಜೆಗಳ ಮೂಲಕ ಸ್ಥೂಲ ರೀತಿಯಲ್ಲಿ ಅಳತೆ ಮಾಡಿ ಎಲ್ಲೆಗಳನ್ನು ಗುರುತಿಸುವರು. ಇದರಿಂದ ತಪ್ಪುಗಳುಂಟಾಗುತ್ತವೆ. ಈ ತಪ್ಪುಗಳ ಪರಿಮಾಣವನ್ನು ಲೆಕ್ಕಾಚಾರಮಾಡಲೂ ಆಗುವುದಿಲ್ಲ. ಸಾಧ್ಯವಾದ ಮಟ್ಟಿಗೆ ಅಂದಾಜುಗಳಲ್ಲಿ ಸ್ವಂತ ಅಭಿಪ್ರಾಯಗಳನ್ನು ಸೇರಗೊಡದೆ ಅವನ್ನು ವಸ್ತುನಿಷ್ಠ ಮಾಡುವುದು ಅಗತ್ಯ. ಬೆಳೆಯ ಕಟಾವಿನ ಪ್ರಯೋಗಗಳನ್ನು ನಡೆಸುವ ದ್ರವ್ಯಖಾತೆ ಮತ್ತು ಕೃಷಿಖಾತೆಗಳೆರಡೂ ಭಿನ್ನಭಿನ್ನವಾದ ಪ್ರಸಾಮಾನ್ಯ ಉತ್ಪತ್ತಿಯ ಅಂಕೆಗಳನ್ನು ಪಡೆಯತ್ತವೆ ಎಂಬುದನ್ನು ಗಮನಿಸಿಬೇಕು. ಇವುಗಳ ವ್ಯತ್ಯಾಸ ಕೆಲವು ವೇಳೆ 15% ರಷ್ಟು ಇರುವುದು. ಫಲಗಳನ್ನು ಖಾತರಿಯಾಗಿ ಮತ್ತು ಸಮಂಜಸವಾಗಿ ಮಾಡಲು ಈ ನ್ಯೂನತೆಗಳನ್ನು ಸರಿಪಡಿಸುವುದು ಅಗತ್ಯ. ಮತ್ತು ಬೆಳೆಗಳ ಕಟಾವಿನ ಪ್ರಯೋಗಗಳನ್ನು ಯಾದೃಚ್ಛಿಕ ಪ್ರತಿದರ್ಶಿ (ರ್ಯಾಂಡಂ ಸ್ಯಾಂಪಲ್) ಸಿದ್ಧಾಂತಕ್ಕೆ ಅನುಸಾರವಾಗಿ ಪ್ರತಿದರ್ಶಿಯ ತಾಕುಗಳಲ್ಲಿ ನಡೆಸತಕ್ಕದ್ದು. 4. ಪ್ರಸಾಮಾನ್ಯ ಉತ್ಪತ್ತಿ ಪಂಚವರ್ಷಗಳಲ್ಲಿ ಬೆಳೆಯ ಕಟಾವಿನ ಪ್ರಯೋಗಗಳ ಫಲಿತಗಳಿಂದ ಪಡೆದ ಸರಾಸರಿ. ಆದರೆ ಪ್ರಸಾಮಾನ್ಯ ಉತ್ಪತ್ತಿ ಹೆಚ್ಚು ಸ್ಥಿರವಾದ ಅಂದರೆ ಕೂಡಲೆ ಅಥವಾ ಪದೇ ಪದೇ ಬದಲಾವಣೆಯಾಗದ ಅಂಕವಾಗಿರಬೇಕು. ಹತ್ತು ವರ್ಷಗಳ ಸರಾಸರಿಯನ್ನು ಪ್ರಸಾಮಾನ್ಯ ಉತ್ಪತ್ತಿಯಾಗಿ ಉಪಯೋಗಿಸಬಹುದು. ಕೆಲವು ರಾಜ್ಯಗಳಲ್ಲಿ ಬಳಸುತ್ತಿರುವ ಭಾರಿತ ಮಧ್ಯಕಕ್ಕೆ (ವೆಯ್ಟೆಡ್ ಅವರೇಜ್) ಬದಲು ಸಮಾಂತರ ಮಧ್ಯಕವನ್ನು ಬಳಸುವುದು ಒಳ್ಳೆಯದು. 5. ಕೃಷಿ ವಿಧಾನಗಳಲ್ಲಿ ಆಗಾಗ ಆಗುತ್ತಿರುವ ಲಾಭವೃದ್ಧಿಗಳಿಗೆ ಲಕ್ಷ್ಯಕೊಟ್ಟು ಹಿಂದಿನ 10 ವರ್ಷಗಳ ಸಂಚಾರೀ ಸರಾಸರಿಯನ್ನು (ಮೂವಿಂಗ್ ಅವರೇಜ್) ತೆಗೆದುಕೊಳ್ಳವುದು ಒಳ್ಳೆಯದು. ಇದರಿಂದ ಪ್ರತಿವರ್ಷದ ಮಾನಕ ಉತ್ಪತ್ತಿಯ ಮರು ಲೆಕ್ಕಾಚಾರ ಅವಶ್ಯಕವಾಗುವುದು. ಆದರೆ ಫಲಿತ ಖಾತರಿ ಮತ್ತು ಸ್ಥಿರತೆಯ ದೃಷ್ಟಿಯಿಂದ ಈ ಸಲಹೆ ಸೂಕ್ತವಾಗಿರುವುದೆಂದು ಅನಿಸುತ್ತದೆ.
	ಸ್ಥಿತಿಕಾರಕ ಅಥವಾ ಸ್ಥಿತಿಗುಣಾಂಕ : ಸ್ಥಿತಿಕಾರಕ ಅಥವಾ ಕಾಲಸ್ಥಿತಿ ಗುಣಾಂಕ ಉತ್ಪತ್ತಿಯ ಮುನ್ಸೂಚನೆಯಲ್ಲಿ ಸೇರಿರುವ ಮತ್ತೊಂದು ಅಂಶ. ಸ್ಥಿತಿಕಾರಕವೆಂದರೆ ಯಾವುದಾದರೂ ತಾಕಿನ ಪ್ರತಿ ಎಕರೆ ಉತ್ಪತ್ತಿಯೊಡನೆ ಸರಾಸರಿ ಅಥವಾ ಸಾಮಾನ್ಯ ಉತ್ಪತ್ತಿದರದ ಹೋಲಿಕೆ. ಪ್ರತಿಯೊಂದು ಬೆಲೆ ಕಾಲಸ್ಥಿತಿ ಗುಣಾಂಕದ ಅಂದಾಜನ್ನು ಪ್ರತಿಯೊಂದು ಹಳ್ಳಿಗೂ ಪರಿಸ್ಥಿತಿಗೆ ಅನುಗುಣವಾಗಿ ಪಟವಾರಿಯೋ ಅಥವಾ ಬಾಕಿದಾರನೋ ಮಾಡುವನು. ಅನಂತರ ಈ ಅಂದಾಜುಗಳ ಸರಾಸರಿಯನ್ನು ಕಂಡುಹಿಡಿದು (ಕೆಲವು ವೇಳೆ ಭಾರಿತ ಸರಾಸರಿಯನ್ನು ಕಂಡುಹಿಡಿದು) ಒಟ್ಟು ಜಿಲ್ಲೆಯ ಸ್ಥಿತಿಗುಣಾಂಕವನ್ನು ಪಡೆಯುವರು. ಒಂದು ಹೊಲದ ಸ್ಥಿತಿ ಗುಣಾಂಕದ ಅಂದಾಜನ್ನು ಮಾಡುವುದು ಕೂಡ ಕಷ್ಟಸಾಧ್ಯ ವಿಷಯ. ಹೀಗಿರುವಲ್ಲಿ ಸಮಗ್ರ ಹಳ್ಳಿಯ ಸಹಜ ಸ್ಥಿತಿಗುಣಾಂಕವನ್ನು ಆಣೆವಾರಿ ಸಂಕೇತದಲ್ಲಿ ವ್ಯಕ್ತಪಡಿಸುವುದರಿಂದ ಸಾಮಾನ್ಯವಾಗಿ ಅಂಕೆಯನ್ನು ಸಮೀಪದ ಆಣೆಗೆ ಒಟ್ಟುಮಾಡಿ ಹೇಳುವುದು ರೂಢಿ. ಇದು ತಪ್ಪನ್ನು ಮತ್ತಷ್ಟು ಹೆಚ್ಚಿಸುವುದು. ಕಂದಾಯದ ಮಾಫಿ ಸ್ಥಿತಿ ಗುಣಾಂಕ ಮೇಲೆ ಅವಲಂಬಿಸಿರುವ ಕಾರಣದಿಂದ ಈ ಗುಣಾಂಕದ ಅಂದಾಜಿನಲ್ಲಿ ಆಗುವ ತಪ್ಪು ಯಾದೃಚ್ಛಿಕ ತಪ್ಪಾಗಿಲ್ಲದೆ ಕೆಳ ಪ್ರವಣತೆಯ ಒಮ್ಮುಖವಾದ ತಪ್ಪಾಗಿದೆ. ತಮಿಳುನಾಡು, ಮಹಾರಾಷ್ಟ್ರ ಮತ್ತು ಅಸ್ಸಾಮ್ ರಾಜ್ಯಗಳಲ್ಲಿ ಸಾಮಾನ್ಯ ಬೆಳೆಯನ್ನು 12 ಆಣೆಗಳೆಂದು ಪರಿಗಣಿಸುವರು. ಉತ್ತರ ಪ್ರದೇಶ ಮತ್ತು ಪಂಜಾಬಿನಲ್ಲಿ 16 ಆಣೆಗಳೆಂದೂ ಮಧ್ಯಪ್ರದೇಶದಲ್ಲಿ 131/4 ಆಣೆಗಳೆಂದೂ ತೆಗೆದುಕೊಳ್ಳುವರು. ಇಂಥ ವ್ಯತಿರಿಕ್ತ ಕ್ರಮಗಳ ದೆಸೆಯಿಂದ ಅಂಕಿಗಳನ್ನು ಸುಲಭವಾಗಿ ಗ್ರಹಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಎಲ್ಲ ರಾಜ್ಯಗಳಿಗೂ ಅನ್ವಯಿಸುವಂತೆ ಏಕರೀತಿಯಾದ ವ್ಯಾಖ್ಯೆಯನ್ನು ಮಾಡುವುದು ಒಳಿತು, ಅಮೆರಿಕದ ಸಂಯುಕ್ತ ರಾಜ್ಯದ ವ್ಯವಸಾಯ ಖಾತೆಯ ಅಂಕಿ ಅಂಶಗಳ ಸಂಸ್ಥೆ ಸಾಮಾನ್ಯ ಕಾಲಸ್ಥಿತಿಯನ್ನು ಈ ರೀತಿ ವ್ಯಾಖ್ಯಿಸುವುದು ; ಪ್ರಸಾಮಾನ್ಯ ಕಾಲಸ್ಥಿತಿ (ನಾರ್ಮಲ್ ಕಂಡಿಷನ್) ಸರಾಸರಿ ಸ್ಥಿತಿ ಆಗಿರದೆ, ಸರಾಸರಿ ಬೆಳೆಗಿಂತ ಹೆಚ್ಚು ಭರವಸೆ ನೀಡುವ ಸರಾಸರಿಗಿಂತ ಮೇಲ್ಮಮಟ್ಟದ ಸ್ಥಿತಿ ಆಗಿರುವುದು ; ಇನ್ನೂ ಮುಂದಕ್ಕೆ ಪ್ರಸಾಮಾನ್ಯ ಸ್ಥಿತಿಯ ಪೂರ್ಣ ಬೆಳೆಯನ್ನಾಗಲಿ ಉತ್ತಮ ದರ್ಜೆಯ ಅತ್ಯಧಿಕ ಪ್ರಮಾಣದ ಬೆಳೆಯಾನ್ನಾಗಲಿ ಸೂಚಿಸುವುದಿಲ್ಲ ; ಸರಾಸರಿ ಮತ್ತು ಮಹತ್ತಮ ಸ್ಥಿತಿಗಳ ನಡುವೆ ಪ್ರಸಾಮಾನ್ಯ ಬರುವುದು. ಪ್ರಸಾಮಾನ್ಯವನ್ನು 13 1/4 ಆಣೆಗಳಾಗಿಯೂ ಮಹತ್ತಮವನ್ನು 16 ಆಣೆಗಳಾಗಿಯೂ ಭಾವಿಸುವ ಮಧ್ಯಪ್ರದೇಶದ ವ್ಯಾಖ್ಯೆಯನ್ನು ಇದು ಹೋಲುತ್ತದೆ.

	ಕಾಲಸ್ಥಿತಿ ಗುಣಾಂಕದ ಪ್ರಾಥಮಿಕ ಅಂದಾಜುಗಳ ಉಗಮದಲ್ಲಿ ಸಮಾನತೆ ಇರುವುದಿಲ್ಲ. ಹಲಕೆಲವು ನ್ಯೂನತೆಗಳಿವೆ. ಪಂಜಾಬಿನಲ್ಲಿ ಉತ್ಪತ್ತಿಯ ಅಂದಾಜುಗಳು ತಹಸೀಲು ಕೇಂದ್ರ ಕಛೇರಿಗಳಿಂದ ಹೊರಟರೆ, ಮಧ್ಯಪ್ರದೇಶದಲ್ಲಿ ಪ್ರತಿಯೊಬ್ಬ ಪಟವಾರಿ ಹಳ್ಳಿಯ ಹಳೆಯ ಆಣೆವಾರಿ ಸ್ಥಿತಿಯನ್ನು ವರದಿ ಮಾಡುವನು. ಅವರವರ ಹಳ್ಳಿಗಳಿಗೆ ಅಂದಾಜುಗಳನ್ನು ಒಪ್ಪಿಸುವಂತೆ ಏಕರೀತಿಯಾಗಿ ಎಲ್ಲ ಪಟವಾರಿಗಳಿಗೂ ನಿಯಮವನ್ನು ವಿಧಿಸುವುದು ಒಳಿತು. ಕಾಫಿ ಮತ್ತು ರಬ್ಬರ್‍ಗಳ ಬಗ್ಗೆ ಏಕರೀತಿಯಾಗಿ ಒಂದೇ ತರಹೆಯ ಆಧಾರದ ಮೇಲೆ ಅಂಕಿ ಅಂಶಗಳನ್ನು ಪಡೆಯುವರು ಮತ್ತು ಅವು ಸಾಮಾನ್ಯವಾಗಿ ತೃಪ್ತಿಕರವಾಗಿರುವುವು.

	ಉತ್ಪತ್ತಿಯ ನಿರಪೇಕ್ಷ ಅಂದಾಜು : ಪ್ರತಿ ಎಕರೆಗೆ, ಮಣಗಳಲ್ಲಿ ಅಥವಾ ಕಿಲೋಗ್ರಾಂಗಳಲ್ಲಿ, ಯಾವ ಮಾನಕ ಪ್ರಸಾಮಾನ್ಯ ಉತ್ಪತ್ತಿಗೂ ತಳಕು ಹಾಕದೆ ನೇರವಾಗಿ ಬೆಳೆಯ ಉತ್ಪತ್ತಿಯ ಅಂದಾಜನ್ನು ಮಾಡುವ ಕ್ರಮ ಶ್ಲಾಘನೀಯ. ಈ ನೇರವಾದ ಅಂದಾಜಿನ ಕ್ರಮ 1920ರಿಂದ ಪಂಜಾಬಿನಲ್ಲಿ ರೂಢಿಯಲ್ಲಿದೆ. ಅಮೆರಿಕದ ಸಂಯುಕ್ತ ಸಂಸ್ಥಾನಗಳಂಥ ಬಹಳ ಸುವ್ಯವಸ್ಥಿತ ದೇಶದಲ್ಲೂ ಮಾನಕ ಪ್ರಸಾಮಾನ್ಯ ಉತ್ಪತ್ತಿ ಮತ್ತು ಕಾಲಸ್ಥಿತಿ ಗುಣಾಂಕದ ಮೂಲಕ ಅಂದಾಜಿನ ಉತ್ಪತ್ತಿಯನ್ನು ಮಾಡುವ ಸುತ್ತುಬಳಸಿನ ಕ್ರಮ ರೂಢಿಯಲ್ಲಿದೆ. ಭಾರತದಲ್ಲಿ ಎಕರೆವಾರು ಅಂಕಿ ಅಂಶಗಳ ವಿವರಗಳು ಪ್ರಪಂಚದ ಎಲ್ಲ ಕಡೆಗಳಿಗಿಂತಲೂ ಬಹುಶಃ ಹೆಚ್ಚು ನಿಖರವಾಗಿವೆ ಮತ್ತು ನಿರಪೇಕ್ಷ ಅಂದಾಜಿನ ಅಂದರೆ ಪ್ರತಿ ಎಕರೆಗೆ ಮಣ ಮತ್ತು ಸೇರುಗಳ ಪದ್ಧತಿಯನ್ನು ಅನುಸರಿಸುವುದರಿಂದ ಉತ್ಪತ್ತಿಯ ಅಂದಾಜಿನ ಮುನ್ಸೂಚನೆಯನ್ನು ಅಷ್ಟೇ ಖಾತರಿಯಿಂದ ಮಾಡಬಹುದು. ಈ ಅಂಕಿಗಳನ್ನು ವಿಹಿತವಾಗಿ ನಡೆಸಿದ ಯಾದೃಚ್ಛಿಕ ನಿದರ್ಶನ ಸರ್ವೇಕ್ಷಣಗಳಿಂದ ಪಡೆಯಬಹುದು ಮತ್ತು ಪಟವಾರಿಗಳು ಪ್ರತಿ ಎಕರೆಯ ಉತ್ಪತ್ತಿಯ ಪ್ರಮಾಣದ ಅಂದಾಜನ್ನು ಮಾಡಲು ಅವನ್ನು ಅನಂತರ ತಾಳೆ ನೋಡಲೂ ಸಾಕಷ್ಟು ಕಾಲ ಮತ್ತು ಸಂದರ್ಭಗಳನ್ನು ಒದಗಿಸಬಹುದು. ಪಂಜಾಬಿನಲ್ಲಿ ಜಾರಿಯಲ್ಲಿರುವ ಈ ಕ್ರಮವನ್ನು ದೇಶಾದ್ಯಂತ ವಿಸ್ತರಿಸಬಹುದು. ಮತ್ತು ಸ್ವೀಕೃತ ಪ್ರಸಾಮಾನ್ಯ ಉತ್ಪತ್ತಿಯನ್ನು ಉಪಯೋಗಿಸುವುದರಿಂದ ಉಂಟಾಗುವ ತಪ್ಪುಗಳನ್ನು ಸಂಪೂರ್ಣವಾಗಿ ವರ್ಜಿಸಬಹುದು. ಅಮೆರಿಕದ ಇತ್ತೀಚಿನ ಪ್ರಯೋಗಗಳಿಂದ ನೇರವಾಗಿ ಪ್ರತಿ ಎಕರೆಗೆ ಉತ್ಪತ್ತಿ ಇಷ್ಟೆಂದು ಅಂದಾಜು ಮಾಡುವುದು ಅಷ್ಟೇನೂ ಖಾತರಿಯಲ್ಲ ಎಂದು ತಿಳಿದುಬರುವುದು. ಏಕೆಂದರೆ ನೇರ ಅಂದಾಜಿನ ವಿಚಲನೆ (ವೇರಿಯನ್ಸ್) ಪ್ರಕೃತ ಪರೋಕ್ಷ ಕ್ರಮದ ಅಂದಾಜಿನ ಎರಡರಷ್ಟಾಗುವುದು.

	ಅಂಕಿ ಅಂಶಗಳ ನಿಖರತೆಯ ತಾಳೆ : ವಾಣಿಜ್ಯ ಬೆಳೆಗಳ ಬಗ್ಗೆ ವ್ಯಾಪಾರದ ಅಂಕಿಗಳೊಡನೆ ಹೋಲಿಸುವುದರಿಂದ ಬೆಳೆಗಳ ಫಲದ ಅಂದಾಜುಗಳ ನಿಖರತೆಯನ್ನು ಸ್ವಲ್ಪಮಟ್ಟಿಗೆ ತಾಳೆ ನೋಡಬಹುದು. ಮುನ್ನಂದಾಜಿನ ಅಂಕಿಗಳೂ ಸಾಮಾನ್ಯವಾಗಿ ಇಳಿತರವಾದ ಅಂದಾಜುಗಳೆಂದು ಕಂಡುಬಂದಿದೆ. ಉದಾಹರಣೆಗೆ, ಹತ್ತಿ ಅಥವಾ ಸೆಣಬು ಬೆಳೆಯುವ ಬಗ್ಗೆ ಯಾವ ವರ್ಷದಲ್ಲಾದರೂ ವಸ್ತುವಿನ ಒಟ್ಟು ಪೂರೈಕೆ ವರ್ಷದ ಆರಂಭದಲ್ಲಿನ ಸಿಲ್ಕು ಮತ್ತು ಆ ವರ್ಷದ ಫಸಲು ಅಥವಾ ಉತ್ಪಾದನೆಯ ಮೊತ್ತಕ್ಕೆ ಸಮವಾಗಿರುವುದು. ಇದು ಹೊರದೇಶಕ್ಕೆ ಮಾಡಲಾದ ರಫ್ತು, ಕಾರ್ಖಾನೆಗಳು ಉಪಯೋಗಿಸಿಕೊಂಡದ್ದು, ಇತರ ವೆಚ್ಚ ಮತ್ತು ವರ್ಷದ ಕೊನೆಯಲ್ಲಿರುವ ಸಿಲ್ಕು ಬಾಕಿ-ಇವುಗಳ ಮೊತ್ತಕ್ಕೆ ಸಮವಾಗಿರಬೇಕು. ವರ್ಷದ ಆರಂಭ ಮತ್ತು ಕೊನೆಯಲ್ಲಿನ ಸಿಲ್ಕು ಹಾಗೂ ರಫ್ತು ಮತ್ತು ಕಾರ್ಖಾನೆಗಳಿಗೆ ಬಳಸಲಾದ ಸರಕು ಇವು ನಿಖರವಾಗಿ ಗೊತ್ತಾಗುತ್ತದೆ. ಕಾರ್ಖಾನೆಗಳಿಗಲ್ಲದೆ ಇತರ ಬಾಬುಗಳಿಗೆ ಖರ್ಚಾಗುವ ವಸ್ತುಗಳ ಅಂದಾಜನ್ನು ಯಾದೃಚ್ಛಿಕ ಪ್ರತಿದರ್ಶಿಯ ಪರಿಶೀಲನೆಯಿಂದ ಹೆಚ್ಚಿನ ಮಟ್ಟಿಗೆ ಸರಿಯಾಗಿಯೇ ತಿಳಿಯಬಹುದು.  ಹೀಗಾಗಿ ಈ ಕೆಳಗಿನ ಸಂಬಂಧವನ್ನು ಪಡೆಯುತ್ತೇವೆ ;

	ಉತ್ಪಾದನೆ = ರಫ್ತುಗಳು + ಕಾರ್ಖಾನೆಗಳ ಬಳಕೆ+ ಇತರ ವೆಚ್ಚ + ವರ್ಷದ ಕೊನೆಯಲ್ಲಿರುವ ಸಿಲ್ಕು - ವರ್ಷದ ಆರಂಭದಲ್ಲಿದ್ದ ಸಿಲ್ಕು
	ಪ್ರತಿವರ್ಷದ ಸಿಲ್ಕು ಬಾಕಿಯನ್ನು ನಿಖರವಾಗಿ ತಿಳಿಯಲಾಗದಿದ್ದರೂ ಹಲವು ಕ್ರಮಾಗತ ವರ್ಷಗಳಿಗೆ - 10 ವರ್ಷಗಳಿಗೆ ಎನ್ನೋಣ-ಮೇಲಿನ ಸಮೀಕರಣವನ್ನು ಪ್ರಯುಕ್ತಿಸಿ ಸರಾಸರಿಯನ್ನು ಕಂಡುಹಿಡಿಯಬಹುದು. ಇದರಿಂದಾಗಿ ಕೆಳಗೆ ಕೊಟ್ಟಿರುವ ಸಂಬಂಧ ಸಿದ್ಧಿಸುವುದು :

ಸರಾಸರಿ ವಾರ್ಷಿಕ ಉತ್ಪಾದನೆ = ಸರಾಸರಿ ರಫ್ತು + ಸರಾಸರಿ ಕಾರ್ಖಾನೆಗಳ ಬಳಕೆ + ಕಾರ್ಖಾನೆಗಳಿಗಲ್ಲದ ಇತರ ಸರಾಸರಿ ವೆಚ್ಚ 1/10 + ಹತ್ತನೆಯ ವರ್ಷದ ಕೊನೆಯಲ್ಲಿರುವ ಸಿಲ್ಕು - ಮೊದಲನೆಯ ವರ್ಷದ ಆರಂಭದಲ್ಲಿದ್ದ ಸಿಲ್ಕು) /10

	ಸಾಧಾರಣವಾಗಿ ಕೊನೆಯ ಮತ್ತು ಆರಂಭದ ಅವಧಿಯಲ್ಲಿ ಸಿಲ್ಕು ಹೆಚ್ಚು ಕಡಿಮೆ ಒಂದೇ ಆಗಿರುವುದು ; ಮತ್ತು ಅವು ಅಸಮವಾಗಿದ್ದರು 10 ರಿಂದ ಭಾಗಿಸಲಾಗುವ ಕಾರಣ ಈ ಅಂಕಿಗಳಲ್ಲಿನ ತಪ್ಪು ಕಡಿಮೆಯಾಗುವುದು. ಕಾಲದ ಅವಧಿಯನ್ನು ಯೋಗ್ಯ ರೀತಿಯಲ್ಲಿ ಆಯುವುದರಿಂದ ತಪ್ಪುಗಳನ್ನು ಮತ್ತಷ್ಟು ಕಡಿಮೆ ಮಾಡಬಹುದು. ಬೆಲೆ ಅತ್ಯಂತ ಹೆಚ್ಚಾಗಿರುವ ಯಾವುದಾದರೂ ವರ್ಷದಲ್ಲಿ ಕೊನೆಯ ಬಾಕಿ ಬಹಳ ಚಿಕ್ಕದಾಗಿರುವುದು. ಆದ್ದರಿಂದ ಅವಧಿಯನ್ನು ಆರಂಭದಲ್ಲಿ ದಾಸ್ತಾನು ಸಣ್ಣದಿರುವ ಅನಂತರದ ವರ್ಷದಿಂದ ಲೆಕ್ಕಹಾಕಬಹುದು ; ಮತ್ತು ಯಾವ ವರ್ಷದಲ್ಲಿ ಬೆಲೆ ಅತ್ಯಂತ ಹೆಚ್ಚಿರುವುದೋ ಆ ವರ್ಷದಲ್ಲಿ ಅವಧಿಯನ್ನು ಕೊನೆಗಾಣಿಸಬಹುದು. ಇದರ ಪರಿಣಾಮವಾಗಿ ವರ್ಷದ ಕೊನೆಯಲ್ಲಿ ದಾಸ್ತಾನು ಚಿಕ್ಕದಾಗಿರುವುದು. ಇದು ಸರಾಸರಿಯನ್ನು (ಅವಧಿಯ ಕೊನೆಯಲ್ಲಿರುವ ದಾಸ್ತಾನು-ಅವಧಿಯ ಆರಂಭದ ದಾಸ್ತಾನು) ಚಿಕ್ಕದಾಗಿ ಮಾಡುವುದು ಮತ್ತು ತಪ್ಪಿನ ಪ್ರಮಾಣ ಬಲುಮಟ್ಟಿಗೆ ಕಡಿಮೆಯಾಗುವುದು.
	ಭವಿಷ್ಯಕ್ಕಾಗಿ ಸಲಹೆಗಳು : 1. ಪ್ರಕೃತ ವಸ್ತು ಸ್ಥಿತಿಯಲ್ಲಿ ಬೇಸಾಯದ ಮತ್ತು ಜಾನುವಾರುಗಳ ಅಂಕಿ ಅಂಶಗಳ ಸಂಗ್ರಹ ಮತ್ತು ವಿಶ್ಲೇಷಣೆ ಅತಿ ಮಹತ್ತ್ವವುಳ್ಳದ್ದಾಗಿದೆ. ನಮ್ಮ ದೇಶದ ಕೃಷಿ ಉತ್ಪಾದನೆಯ ಅಂದಾಜುಗಳನ್ನು ತ್ವರಿತವಾಗಿಯೂ ಖಾತರಿಯಾಗಿಯೂ ಪಡೆಯಲು ಸರ್ವಪ್ರಯತ್ನವನ್ನೂ ಮಾಡಬೇಕು. 2. ರೈತವಾರಿ ಪ್ರದೇಶಗಳಲ್ಲಿ ಸರಾಸರಿ ಅಂಕಿಗಳೂ ಸಾಕಷ್ಟು ವಿಶ್ವಾಸಾರ್ಹವಾಗಿವೆ. ಆದರೆ ಖಾಯಂ ಗುತ್ತಾ ಪ್ರದೇಶಗಳಲ್ಲಿ ಹಾಗಲ್ಲ. ಅಮೀನ ಅಥವಾ ಕ್ರಮಚಾರಿಗಳನ್ನು ಖಾಯಂ ಗುತ್ತಾ ಪ್ರದೇಶಗಳಲ್ಲಿ ಕೆಲವೆಡೆ ನೇಮಕ ಮಾಡಿ ಬೆಳೆಯ ವರದಿಮಾಡುವಕೆಲಸವನ್ನು ಅವರಿಗೊಪ್ಪಿಸಿರುವ ಪ್ರಯೋಗಗಳನ್ನು ಅದೇ ರೀತಿಯ ಇತರ ಪ್ರದೇಶಗಳಿಗೂ ವಿಸ್ತರಿಸಬೇಕು. 3. ಪಟವಾರಿಯ ಅಥವಾ ಅಮೀನನ ಅಧಿಕಾರ ವ್ಯಾಪ್ತಿಗೊಳಪಟ್ಟ ಪ್ರದೇಶಗಳನ್ನು ಯೋಗ್ಯವಾದ ರೀತಿಯಲ್ಲಿ ಕಡಿಮೆ ಮಾಡಿ, ಅವರಿಗೆ ಅವಶ್ಯಕವಾದಾಗ ಹೊಲದಿಂದ ಹೊಲಕ್ಕೆ ಹೋಗಿ ಪರಿಶೀಲಿಸಿ ಅಂಕಿ ಸಂಖ್ಯೆಗಳನ್ನು ಸಂಗ್ರಹಿಸಲು ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. 4. ಶಿಷ್ಟ ಪ್ರಸಾಮಾನ್ಯ ಉತ್ಪತ್ತಿಯನ್ನು ಯಾದೃಚ್ಛಿಕ ಪ್ರತಿದರ್ಶಿ ತಂತ್ರದ ಮೇಲೆ ನಡೆಸಿದ ಬೆಳೆಯ ಕಟಾವಿನ ಪ್ರಯೋಗಗಳ ಆಧಾರದ ಮೇಲೆ ಗುಣಾಂಕ ಹಾಕಬೇಕು. 5. ಅನ್ಯಕ್ರಮವಾಗಿ ಉತ್ಪತ್ತಿಯ ಅಂದಾಜನ್ನು ಕಾಲಸ್ಥಿತಿ ಗುಣಾಂಕ ಮತ್ತು ಶಿಷ್ಟಪ್ರಸಾಮಾನ್ಯ ಉತ್ಪತ್ತಿಯೊಡನೆ ತಳಕುಹಾಕದೆ ಪಂಜಾಬಿನಲ್ಲಿ ಈಗ ಮಾಡುತ್ತಿರುವಂತೆ ನೇರವಾಗಿ ಗೊತ್ತುಮಾಡಬಹುದು. 6. ಎಲ್ಲ ರಾಜ್ಯಗಳಲ್ಲೂ ಪ್ರಕೃತ ಜಾನುವಾರುಗಳ ಅಂಕಿ ಅಂಶಗಳನ್ನು 5 ವರ್ಷಕ್ಕೊಮ್ಮೆ ಸಂಗ್ರಹಿಸಬೇಕು ಮತ್ತು ವರ್ಗೀಕರಣಕ್ರಮ ಎಲ್ಲ ಕಡೆಯಲ್ಲಿ ಒಂದೇ ಸಮವಾಗಿರಬೇಕು. ಹಾಲಿನ ಉತ್ಪಾದನೆ, ಹಾಲಿನಿಂದ ಮಾಡಿದ ವಸ್ತುಗಳು, ಪ್ರಕೃತ ಜಾನುವಾರುಗಳ ರಕ್ಷಣೆ, ದನಕರುಗಳ ಮರಣ ಮುಂತಾದ ಹೆಚ್ಚಿನ ಮಾಹಿತಿಗಳನ್ನು ಗಣತಿಯಲ್ಲಿ ಸೇರಿಸಬೇಕು. 7. ನಾನಾ ವಿಧದ ಅಂಕಿ ಅಂಶಗಳ ವಿವರಗಳನ್ನು ಸರಿಸಮಾನಗೊಳಿಸಲು ಕೇಂದ್ರ ಸಂಸ್ಥೆ ಇರುವುದು ಒಳಿತು. ಕೇಂದ್ರೀಯ ಸಾಂಖ್ಯಕ ಸಂಸ್ಥೆ ಈಗ ಏರ್ಪಟ್ಟಿದೆ. 8. ಹೊಲಗದ್ದೆಗಳ ಆಳುಗಳು ಅಥವಾ ಹಿಡುವಳಿ ಜಮೀನುಗಳ ವಿಸ್ತೀರ್ಣ ಮತ್ತು ತಾಕುಗಳ ಸಲೆ-ಇವಕ್ಕೆ ಸಂಬಂಧಪಟ್ಟ ಅಂಕಿ ಅಂಶಗಳನ್ನು ಸಂಗ್ರಹಿಸಬೇಕು. ಒಡೆತನದ ಭೂಮಿ ಮತ್ತು ಸಾಗುವಳಿ ಭೂಮಿಗಳಿಗೆ ಪ್ರತ್ಯೇಕ ಅಂಕಿಗಳನ್ನು ಕೊಡಬೇಕು. 9. ವಾರದ ಸಾಗುವಳಿ ಮತ್ತು ಗುತ್ತಿಗೆ ಸಾಗುಳಿಯ ಪ್ರಕಾರ ಜಮೀನುಗಳನ್ನು ವಿಂಗಡಿಸಿ, ಎಕರೆವಾರು ಮಾಹಿತಿಗಳನ್ನು ಒದಗಿಸಬೇಕು. 10. ಬೇಸಾಯದ ಮುಟ್ಟುಗಳು, ಸಲಕರಣೆ, ಪಶುಸಂಗೋಪನ, ಜಾನುವಾರುಗಳ ರಕ್ಷಣೆ, ಗೊಬ್ಬರಗಳು, ಬೀಜಗಳು, ಬೇಸಾಯದ ಕೆಲಸಗಾರರ ಕೂಲಿ, ಕಟ್ಟಡಗಳ ರಕ್ಷಣೆ ಕಾಲುವೆಗಳು, ಬಾವಿಗಳು, ಇವುಗಳ ರಕ್ಷಣೆ ಮತ್ತು ಮರಮುಟ್ಟು ಇವುಗಳ ವೆಚ್ಚ, ಜಮೀನುದಾರರಿಗೆ ಕೊಡುವ ಗುತ್ತಿಗೆ, ತೆರಿಗೆಗೆ ಮತ್ತು ಕಂದಾಯ ಮುಂತಾದವುಗಳಿಗೆ ತೆರತಕ್ಕ ಹಣ ಇತ್ಯಾದಿ ಮಾಹಿತಿಗಳನ್ನು ಸಂಗ್ರಹಿಸಬೇಕು. 11. ಬೇಸಾಯದ ಕೆಲಸಗಾರರ ಸಂಖ್ಯೆ ಮತ್ತು ಅವರ ಕೂಲಿಯ ದರಗಳು. ಈ ಅಂಕಿಗಳು ಪ್ರಕೃತ ತೋಟ ಮತ್ತು ಕಾನುಗಳ (ಎಸ್ಟೇಟ್ಸ್) ಕೆಲಸಗಾರರಿಗೆ ಮಾತ್ರ ದೊರೆಯುವುದು. 12. ಬೇಸಾಯದ ಸಾಲಗಳು ಮತ್ತು ಬಡ್ಡಿಯ ದರಗಳು  13. ಮನೆ ಖರ್ಚಿಗಾಗಿ ಉಳಿಸಿಕೊಂಡು ಬೆಳೆಯ ಭಾಗ ಮತ್ತು ಮಾರಿದ ಅಥವಾ ಬೇರೆ ರೀತಿಯಲ್ಲಿ ವಿಲೆ ಮಾಡಿದ ಬೆಳೆಯ ಪ್ರಮಾಣ. 

	ಬೇಸಾಯದ ಅಂಕಿ ಅಂಶಗಳ ಸಂಗ್ರಹ ಮತ್ತು ಅರ್ಥವಿವರಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚಿನ ಆಸಕ್ತಿಯನ್ನು ತೋರುತ್ತಲಿವೆ. ಖಾತರಿಯಾದ ಮತ್ತು ತುಲನಾತ್ಮಕ ವಿಮರ್ಶೆ ಮಾಡಲು ಸಾಧ್ಯವಾಗುವಂಥ ಅಂಕಿ ಅಂಶಗಳು ಭಾರತದ ಎಲ್ಲ ರಾಜ್ಯಗಳಿಗೂ ದೊರೆಯುವಂತಾಗಿ ಅವು ದೇಶಾಭಿವೃದ್ಧಿಗೆ ಸಹಾಯಕಗಳಾಗಬೇಕು.                 (ಎಂ.ವಿ.ಜೆ.)

	ಕೃಷಿ ಉತ್ಪನ್ನಗಳ ವರ್ಧನೆ : ಇಲ್ಲಿ ಗಮನಿಸಬೇಕಾದ ಪ್ರಧಾನ ಅಂಶಗಳು, ನೆಲ, ನೀರು, ಜಾನುವಾರು, ಗೊಬ್ಬರ, ಹವೆ ಇತ್ಯಾದಿ. ಭಾರತದ ಜನಸಂಖ್ಯೆಯಲ್ಲಿ 80% ಕೃಷಿಯಲ್ಲಿ ನಿರತವಾಗಿವೆ. ಆದ್ದರಿಂದ ಕೃಷಿ ಉತ್ಪನ್ನಗಳ ವರ್ಧನೆ ದೇಶದ ಸರ್ವಾಂಗೀಣ ಪ್ರಗತಿಗೆ ತೀರ ಅವಶ್ಯ.

	ಭೂ ಸಂಪತ್ತು : ಭಾರತದಲ್ಲಿ ನೆಲ 326.8 ಮಿಲಿಯನ್ ಹೆಕ್ಟೇರ್ ಇದೆ. ಇದರಲ್ಲಿ ಉಳುಮೆಯ ಭೂಮಿ ಸುಮಾರು 135.8 ಮಿ.ಹೆ. ಎಲ್ಲ ಭೂಮಿಯನ್ನು ಉಳಲು ಅಸಾಧ್ಯ. ಅದು ಕೂಡದು. ಅರಣ್ಯ ಸಂಪತ್ತು ಹಾಗೂ ಹುಲ್ಲುಗಾವಲು ನಿಸರ್ಗದ ಕೊಡುಗೆ. ಇವು ಕೃಷಿ ಅಭಿವೃದ್ಧಿಗೆ ಪೂರಕವಾಗಿವೆ. ಉಳುಮೆಗೆ ಬಾರದ ಭೂಮಿಯಲ್ಲಿ ಬಂಜರು ಭೂಮಿ, ಮರುಭೂಮಿ ಅಡಕವಾಗಿವೆ. ಉಳುಮೆಯ ಭೂಮಿಯನ್ನು ವಿಸ್ತರಿಸುವುದಕ್ಕಿಂತ ಈಗಿರುವ ಕ್ಷೇತ್ರದಲ್ಲಿಯೇ ಹೆಚ್ಚು ಫಸಲನ್ನು ಪಡೆಯುವುದು ಯೋಗ್ಯ. 

	ಜಲ ಸಂಪತ್ತು : ಭಾರತದಲ್ಲಿ ನೀರಾವರಿ ವ್ಯಾಪಿಸಿರುವ ಪ್ರದೇಶ 26.4 ಮಿ. ಹೆಕ್ಟೇರುಗಳು (1968). ನೀರುಣ್ಣುವ ಭೂಮಿಯಲ್ಲಿ ಆಹಾರೋತ್ಪಾದನೆ ಅಧಿಕವಾಗಿ ಹೆಚ್ಚಬೇಕು. ನೀರಾವರಿ ಲಭ್ಯವಾಗುವಂಥ ಭೂಮಿಯ ಕ್ಷೇತ್ರವನ್ನು ಹೆಚ್ಚಿಸಬೇಕು. ಆದರೂ ಒಣಬೇಸಾಯ ಕಕ್ಷೆಯಲ್ಲಿ ಬರುವ ಭೂಮಿ ವಿಶಾಲವಾಗಿದೆ. ಮಳೆಯ ನೀರೇ ಈ ವ್ಯವಸಾಯಕ್ಕೆ ಗತಿ. ಭೂಮಿಯ ಮೇಲೆ ಬಿದ್ದ ನೀರು ಸಂಗೃಹೀತವಾಗಿ ಬೆಳೆಗಳಿಗೆ ಸಕಾಲದಲ್ಲಿ ಪೋಷಕವಾಗುವಂತೆ ಆಗಬೇಕು.

	ಅಧಿಕ ಆಹಾರೋತ್ಪಾದನೆಗೆ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರ ಅತ್ಯವಶ್ಯ. ಅದರಲ್ಲಿ ಸಸಾರಜನಕಯುಕ್ತ ರಾಸಾಯನಿಕ ಗೊಬ್ಬರಗಳ ಅವಶ್ಯಕತೆ 2 ರಿಂದ 2.5 ಮಿ.ಟನ್ನಿನಷ್ಟು ಇದೆ. ಒಂದು ಟನ್ ಕೃತಕ ಗೊಬ್ಬರದ ಬಳಕೆಯಿಂದ 75 ಎಕರೆ ಭೂಮಿಯಲ್ಲಿಯ ಅಧಿಕ ಉತ್ಪಾದನೆ 10 ಟನ್ನಿಗಿಂತ ಮಿಕ್ಕುವಂತಿದೆ. ನಮ್ಮ ದೇಶದ ವ್ಯವಸಾಯಕ್ಕೆ ಕನಿಷ್ಠ 1.5 ಮಿ.ಟ. ಗೊಬ್ಬರ-ಅದು ಎಕರೆಗೆ 30 ಪೌಂಡಿನಂತೆ- ಬೇಕಾಗಿದೆ.

	ಜಾನುವಾರುಗಳು : ಇವು ಕೃಷಿಗೆ ಮೂಲಾಧಾರ. ಕೃಷಿಯ ಉಳುಮೆಗೆ ಸಹಾಯಕ. ಜಾನುವಾರುಗಳು ಹಾಲು-ಹೈನು, ಮಾಂಸ ಹಾಗು ಗೊಬ್ಬರ ಕೊಡುತ್ತವೆ. ಇವೆಲ್ಲ ದೇಶದ ಸಂಪತ್ತೆಂದು ಪರಿಗಣಿಸಲಾಗಿದೆ. ನಮ್ಮ ದೇಶದ ಜಾನುವಾರುಗಳ ಸಂಪತ್ತು ಈ ರೀತಿ ಇದೆ (1966) (ಸಾವಿರಗಳಲ್ಲಿ)- ದನ 175,987, ಎಮ್ಮೆ 52,876, ಕುರಿ 42,010, ಆಡು 64,549, ಕುದುರೆ ಮತ್ತು ತಟ್ಟು 1,148, ಕೋಳಿ 115,071, ಇತರ ಜಾನುವಾರುಗಳು 7,157.					(ಎಂ.ಕೆ.ಬಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ